ವಾಷಿಂಗ್ಟನ್: ಕ್ಯಾಪಿಟಲ್ ಕಟ್ಟಡದ ಮೇಲೆ ಮತ್ತೊಮ್ಮೆ ದಾಳಿ ನಡೆದಿದೆ. ಕ್ಯಾಪಿಟಲ್ ಕಟ್ಟಡದ ಮುಂದಿದ್ದ ಬ್ಯಾರಿಕೇಡ್ಗೆ ವ್ಯಕ್ತಿಯೊಬ್ಬ ಕಾರು ಗುದ್ದಿಸಿದ ಪರಿಣಾಮ ಅಧಿಕಾರಿಯೊಬ್ಬರು ಸ್ಥಳದಲ್ಲಿಯೇ ಮೃತರಾಗಿದ್ದಾರೆ.
ಇನ್ನೊಬ್ಬ ಭದ್ರತಾ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಿಂದ ಡಿಕ್ಕಿ ಹೊಡೆದ ನಂತರ ಚಾಲಕ ಕೈಯಲ್ಲಿ ಚಾಕು ಹಿಡಿದುಕೊಂಡು ಕಾರಿನಿಂದ ಇಳಿದಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಚಾಲಕನನ್ನು ಗುಂಡಿಕ್ಕಲಾರಂಭಿಸಿದರು. ಪರಿಣಾಮ ಚಾಲಕ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. 25 ವರ್ಷದ ನೋವಾ ಗ್ರೀನ್ ಮೃತ ಚಾಲಕ.
ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಜಿಲ್ ಬೈಡನ್ ಈಸ್ಟರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿಯೇ ಈ ದಾಳಿ ನಡೆದಿದೆ ಎಂದು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಮೃತ ಪೊಲೀಸ್ ಅಧಿಕಾರಿಗೆ ಬೈಡನ್ ಸಂತಾಪ ಸೂಚಿಸಿದ್ದಾರೆ.
ಇದು ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯವಲ್ಲ. ಈ ಬಗ್ಗೆ ಸಂಪೂರ್ಣ ತನಿಖೆಯನ್ನು ಶೀಘ್ರವೇ ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.