ಬೆಂಗಳೂರು: ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವಂತ ನೂತನ ಮಾರ್ಗಸೂಚಿ ಕ್ರಮಗಳು ಏಕಾಏಕಿ ಜಾರಿಗೆ ತಂದಿರುವುದಲ್ಲ. ಗೈಡ್ ಲೈನ್ಸ್ ಜಾರಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಜೋರಾಗಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರಿ ಹೋಗದಂತೆ ಕ್ರಮ ಕೈಗೊಳ್ಳುವ, ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಇದು ಏಕಾಏಕಿ ಮಾಡಿದ ನಿಯಮ ಅಲ್ಲ ಎಂದರು.
ದಯವಿಟ್ಟು ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಇನ್ನೆರಡು ತಿಂಗಳು ಕೊರೋನಾ ಆರ್ಭಟ ಇರಲಿದೆ ಎಂಬುದಾಗಿ ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ಇದರಿಂದಾಗಿ ಪರಿಸ್ಥಿತಿ ಕೈ ಮೀರಬಾರದೆಂದು ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಕ್ಕಳಲ್ಲೇ ಹೆಚ್ಚು ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಥಿಯೇಟರ್ ರೂಲ್ಸ್ ಬದಲಾವಣೆ ಪ್ರಶ್ನೆಯೇ ಇಲ್ಲ. 8 ಜಿಲ್ಲೆಗಳ ಥಿಯೇಟರ್ ಗಳಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಈಗ ಮಾಡಿರುವ ನಿಯಮ ತಾತ್ಕಾಲಿಕ ಮಾತ್ರವಾಗಿದೆ ಎಂದರು.