ಬೆಂಗಳೂರು: ನೆಲ್ಲಿಕಾಯಿಯನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ನೆಲ್ಲಿಕಾಯಿಯನ್ನು ಆಹಾರದಲ್ಲೂ ಉಪಯೋಗಿಸುತ್ತಾರೆ. ಹಾಗು ಇದನ್ನು ಹಬ್ಬದ ದಿನಗಳಲ್ಲಿ, ಅಂದರೆ ದೀಪಾವಳಿ ಮತ್ತು ಕಾರ್ತೀಕ ಮಾಸದ ತುಳಸಿ ಮದುವೆಗಳಲ್ಲಿ ನೆಲ್ಲಿಕಾಯಿಗೆ ತುಂಬಾ ಮಹತ್ವವಿದೆ. ನೆಲ್ಲಿಕಾಯಿಯು ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು “ಸಿ” ಜೀವಸತ್ವವನ್ನು ಹೊಂದಿರುತ್ತದೆ.
ನೆಲ್ಲಿಕಾಯಿಯನ್ನು ನೇರವಾಗಿ ತಿನ್ನಲು ಇಚ್ಛಿಸದವರು ಅದನ್ನು ಉಪ್ಪಿನಕಾಯಿ, ಚಟ್ನಿ, ಹಾಗು ತಂಬುಳಿಗಳನ್ನಾದರೂ ಮಾಡಿಕೊಂಡು ಸೇವಿಸಬಹುದು. ಬಹಳಷ್ಟು ಜನರು ನೆಲ್ಲಿಕಾಯಿಯನ್ನು ಒಣಗಿಸಿಕೊಂಡು ವರ್ಷಪೂರ್ತಿ ಉಪಯೋಗಿಸುತ್ತಾರೆ. ನೆಲ್ಲಿಕಾಯಿಯ ಗಿಡದ ಬೇರು, ಎಲೆ, ಕಾಯಿ ಎಲ್ಲವು ಔಷಧಿ ಗುಣಗಳನ್ನು ಹೊಂದಿವೆ.
ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು, ಸಣ್ಣ ತುಂಡುಗಳನ್ನು ಮಾಡಿ ನೀರಿಗೆ ಹಾಕಿ ಕುದಿಸಬೇಕು. ನಂತರ ಅದಕ್ಕೆ ಜೀರಿಗೆ ಪುಡಿ, ಮೆಂತ್ಯೆ ಪುಡಿ, ಸ್ವಲ್ಪ ಅರಿಸಿನ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಈ ರೀತಿಯಾಗಿ ಕಷಾಯವನ್ನು ಮಾಡಿಕೊಂಡು ಪ್ರತಿನಿತ್ಯ ಕುಡಿಯುವುದರಿಂದ ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಿ, ಮಧುಮೇಹವು ಹತೋಟಿಗೆ ಬರುತ್ತದೆ.
ನೆಲ್ಲಿಕಾಯಿ ಅತಿ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಆದ್ದರಿಂದ ಪ್ರತಿದಿನ ನೆಲ್ಲಿಕಾಯಿಯ ರಸ ಸೇವಿಸುವುದರಿಂದ, ಅದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ ಉತ್ಪಾದನೆಯನ್ನು ನಿಯಂತ್ರಿಸಿ, ದೇಹದ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ನೆಲ್ಲಿಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ನೆರಳಿನಲ್ಲಿ ಒಣಗಿಸಿ, ಈ ತುಂಡುಗಳು ಕರಕಲಾಗುವವರೆಗೆ ತೆಂಗಿನೆಣ್ಣೆಯಲ್ಲಿ ಹಾಕಿ ಕುದಿಸಿ. ಈ ಗಾಢಬಣ್ಣದ ಎಣ್ಣೆಯು ಕೂದಲಿನ ನೆರೆತವನ್ನು ತಡೆಗಟ್ಟಲು ಉತ್ತಮ ಔಷಧಿ.
ಅತಿ ಆಮ್ಲೀಯತೆ ಉಂಟಾದ ಸಂದರ್ಭದಲ್ಲಿ ಒಂದು ಗ್ರಾಂ ನೆಲ್ಲಿಪುಡಿಯನ್ನು ಸ್ವಲ್ಪ ಸಕ್ಕರೆ ಸೇರಿಸಿ ಹಾಲು ಅಥವಾ ನೀರಿನಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿಯಂತೆ ಕುಡಿಯುತ್ತಿದ್ದರೆ ಈ ತೊಂದರೆಯಿಂದ ಶಮನ ದೊರೆಯುತ್ತದೆ. ಅಲ್ಲದೆ ದೇಹದ ಎಲ್ಲಾ ವಿಷಶಕ್ತಿಗಳನ್ನು ಹೊರಹಾಕಿ ದೇಹದಲ್ಲಿ ನಿರೋಧಕ ಶಕ್ತಿಯನ್ನು ತುಂಬುತ್ತದೆ.
1 ಚಮಚ ನೆಲ್ಲಿ ಪುಡಿಗೆ ಅಷ್ಟೇ ಪ್ರಮಾಣದ ಬೆಲ್ಲವನ್ನು ಬೆರೆಸಿ ದಿನಕ್ಕೆರಡು ಬಾರಿ 2 ತಿಂಗಳ ತನಕ ಸೇವಿಸುವುದರಿಂದ ಸಂಧಿವಾತ ಮತ್ತು ಕೀಲುನೋವುಗಳು ಕಡಿಮೆಯಾಗುತ್ತದೆ.
ಕೆಲವರಿಗೆ ಬೆಳಗಿನ ಸಮಯದಲ್ಲಿ ವಾಕರಿಕೆ, ತಲೆಸುತ್ತಿನಂತಹ ಸಮಸ್ಯೆ ಇರುತ್ತದೆ. ಈ ಸಮಸ್ಯೆಗಳಿಗೆ ನೆಲ್ಲಿಕಾಯಿಯ ಸೇವನೆಯು ರಾಮಬಾಣವಾಗಿದೆ.