ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಮ್ಮೆಲ್ಲರ ವಾಟ್ಸ್ ಆ್ಯಪ್ಗೊಂದು ಸಂದೇಶ ಬರುತ್ತಿದೆ. ಪಿಂಕ್ ವಾಟ್ಸ್ಆ್ಯಪ್ ಬಳಸಿ ನೂತನ ಅನುಭವ ಪಡೆಯಿರಿ ಎಂಬ ಲಿಂಕ್ಗಳು ಹರಿದಾಡುತ್ತಿವೆ.
ಆದರೆ, ನೀವೇನಾದರೂ ಕೊಂಚ ಯಾಮಾರಿದರೂ ಸಾಕು ನಿಮ್ಮ ಮೊಬೈಲ್ನಲ್ಲಿರುವ ಎಲ್ಲ ಮಾಹಿತಿ ತನ್ನಿಂತಾನೇ ಸೈಬರ್ ಕಳ್ಳರಿಗೆ ರವಾನೆಯಾಗುತ್ತದೆ. ಹೀಗೆ ಬರುವ ಲಿಂಕ್ಗಳ್ಯಾವವೂ ಅಧಿಕೃತವಾಗಿ ವಾಟ್ಸ್ಆ್ಯಪ್ ಕಂಪನಿಯಿಂದ ಬರುವುದಿಲ್ಲ. ವಾಟ್ಸ್ಯಾಪ್ ಬಳಕೆದಾರರ ಮಾಹಿತಿಯನ್ನು ಕದಿಯಲು ಹ್ಯಾಕರ್ಸ್ ಈ ಕುತಂತ್ರಾಂಶವನ್ನು ಹರಿಬಿಟ್ಟಿದ್ದಾರೆ.
ಹೀಗಾಗಿ ಅಪ್ಪೀ ತಪ್ಪಿ ನೀವೇನಾದರೂ ನಿಮ್ಮ ವಾಟ್ಸ್ಆ್ಯಪ್ಗೆ ಬಂದ ಲಿಂಕ್ನ್ನು ಟಚ್ ಮಾಡಿದರೆ ನಿಮ್ಮೆಲ್ಲ ಮಾಹಿತಿ ಹ್ಯಾಕರ್ಸ್ಗಳಿಗೆ ರವಾನೆಯಾಗುತ್ತದೆ. ಈ ಬಗ್ಗೆ ಸೈಬರ್ ಪರಿಣಿತರು ಎಚ್ಚರಿಕೆ ನೀಡುತ್ತಲೇ ಇದ್ದಾರೆ.
ಆದರೂ ಕೆಲವರು ತಮ್ಮ ವಾಟ್ಸ್ಆ್ಯಪ್ನ್ನು ಗುಲಾಬಿ ಬಣ್ಣಕ್ಕೆ ತಿರುಗಿಸುವ ಆಸೆಯಿಂದ ಈ ಲಿಂಕ್ ಒತ್ತಿ ಹೈರಾಣಾಗಿದ್ದಾರೆ. ಈ ಲಿಂಕ್ನ್ನು ಒತ್ತುತ್ತಲೇ ಅವರ ಫೋನ್ಬುಕ್ನಲ್ಲಿರುವ ಕಾಂಟ್ಯಾಕ್ಟ್ಗಳಿಗೆಲ್ಲ ಪಿಂಕ್ ವಾಟ್ಸ್ಆ್ಯಪ್ ಬಗೆಗಿನ ಲಿಂಕ್ ರವಾನೆಯಾಗುತ್ತದೆ.
ಇದಾದ ಬಳಿಕ ಈ ಲಿಂಕ್ ನಕಲಿ ಎಂದು ತಿಳಿದು ಡಿಲೀಟ್ ಮಾಡಲು ಹೋದರೆ ಡಿಲೀಟ್ ಆಗುತ್ತಿಲ್ಲ. ಈ ಲಿಂಕ್ ಒಂದು ಮಾಲ್ವೇರ್ ತಂತ್ರಾಂಶ. ಇದರ ಮೂಲಕ ಸೈಬರ್ ಖದೀಮರು ಸರಳವಾಗಿ ನಿಮ್ಮೆಲ್ಲ ಮಾಹಿತಿಯನ್ನು ಕದಿಯಬಲ್ಲರು. ಹೀಗಾಗಿ ಈ ಥರದ ಯಾವುದೇ ಅನಧೀಕೃತ ಲಿಂಕ್ಗಳು ನಿಮ್ಮ ಮೊಬೈಲ್ಗೆ ಬಂದರೆ ಅದನ್ನು ಬಳಸಬೇಡಿ.