ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ‘ಮೇಜರ್’ ಶ್ವಾನ ಶ್ವೇತಭವನದ ಉದ್ಯೋಗಿಯೊಬ್ಬರನ್ನು ಕಚ್ಚಿ ಗಾಯಗೊಳಿಸಿದೆ. ವೈಟ್ ಹೌಸ್ನ ದಕ್ಷಿಣ ಭಾಗದ ಹುಲ್ಲುಗಾವಲಿನಲ್ಲಿ ಕೆಲಸ ಮಾಡುತ್ತಿದ್ದ ರಾಷ್ಟ್ರೀಯ ಉದ್ಯಾನವನ ಸೇವೆಯ ಉದ್ಯೋಗಿಯೊಬ್ಬನನ್ನು ಕಚ್ಚಿದೆ. ಕೂಡಲೇ ಆತನನ್ನು ವೈಟ್ ಹೌಸ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ.
ಅಧ್ಯಕ್ಷ ಜೋ ಬೈಡನ್ ಶ್ವಾನಪ್ರಿಯರು. ಹೀಗಾಗಿ ಶ್ವೇತಭವನಕ್ಕೆ ತಮ್ಮ ಮುದ್ದಿನ ಸಾಕುನಾಯಿಗಳಾದ ಚ್ಯಾಂಪ್ ಮತ್ತು ಮೇಜರ್ನನ್ನು ಕರೆತಂದು ಸಾಕುತ್ತಿದ್ದಾರೆ. ಕಳೆದ ವರ್ಷ ಜೋ ಬೈಡನ್ ವಿಲ್ಮಿಂಗ್ಟನ್ ನಲ್ಲಿರುವ ತಮ್ಮ ನಿವಾಸದಲ್ಲಿ ಮೇಜರ್ ಜೊತೆಗೆ ಆಟವಾಡುತ್ತಿದ್ದಾಗ ಬಿದ್ದು ಬಲಗಾಲು ಮುರಿದುಕೊಂಡಿದ್ದರು. ಮೇಜರ್ ನಾಯಿಯನ್ನು ಬೈಡನ್ ಅವರು 2018ರಲ್ಲಿ ಹ್ಯೂಮನ್ ಅಸೋಸಿಯೇಷನ್ ನಿಂದ ದತ್ತು ಪಡೆದುಕೊಂಡಿದ್ದರು.
ಚ್ಯಾಂಪ್ ಬೈಡನ್ ಅವರ ಮನೆಗೆ 2008ರಲ್ಲಿಯೇ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾಗ ಬಂದಿತ್ತು. ಮೂರು ವರ್ಷದ ಜರ್ಮನ್ ಶೆಫರ್ಡ್ ತಳಿಯ ಮೇಜರ್ ಮಾರ್ಚ್ 10 ರಂದು ಶ್ವೇತಭವನದ ಸಿಬ್ಬಂದಿಯನ್ನು ಕಚ್ಚಿತ್ತು. ಆ ಘಟನೆ ನಡೆದು 20 ದಿನಗಳ ಅಂತರದಲ್ಲಿ ಅಂಥದ್ದೇ ಮತ್ತೊಂದು ಘಟನೆ ದಾಖಲಾಗಿದೆ.
ನಿರಾಶ್ರಿತ ಕೇಂದ್ರದಲ್ಲಿದ್ದ ಮೇಜರ್ ನಾಯಿ ಅಧ್ಯಕ್ಷರ ಅಧಿಕಾರ ಕೇಂದ್ರ ಶ್ವೇತಭವನಕ್ಕೆ ಬಂದು ನೆಲೆಸಿರುವುದು ವಿಶೇಷವೆನಿಸಿದೆ. ಮೂಲತಃ ಪ್ರಾಣಿಪ್ರಿಯರಾಗಿರುವ ಬೈಡನ್ ಅವರು ಶ್ವೇತ ಭವನದಲ್ಲಿ ಬೆಕ್ಕುಗಳನ್ನು ಸಹ ಸಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.