ಲಂಡನ್: ಇಲ್ಲೊಬ್ಬ ಮಹಿಳೆ ಎರಡು ಕಾರುಗಳ ಮಧ್ಯೆ ತನ್ನ ಕಾರ್ನ್ನು ಪಾರ್ಕ್ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಪ್ಯಾರಲಲ್ ಪಾರ್ಕಿಂಗ್ಗಾಗಿ ಕೆಲವರು ಪಡುವ ಕಷ್ಟಕ್ಕೆ ಈ ವಿಡಿಯೋ ಸಾಕ್ಷಿ.
ಒಂದು ನಿಮಿಷದ ಈ ವಿಡಿಯೋ ಸದ್ಯ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಮುಂದೆ ಹಾಗೂ ಹಿಂದೆ ಕಾರುಗಳು ನಿಂತಿದ್ದರಿಂದ ಮಧ್ಯದಲ್ಲಿ ಬಾಕಿ ಉಳಿದ ಜಾಗದಲ್ಲಿ ತನ್ನ ಕಾರನ್ನ ನಿಲ್ಲಿಸೋಕೆ ಮಹಿಳೆ ಪಡುವ ಪಾಡು ಹೇಳತೀರದು. ಒಂದು ಸಂದರ್ಭದಲ್ಲಂತೂ ಮಹಿಳೆ ಕಾರಿನಿಂದ ಕೆಳಗಿಳಿದು ತನ್ನ ಹೆಜ್ಜೆ ಮೂಲಕವೇ ಅಲ್ಲಿರುವ ಜಾಗವನ್ನ ಹಾಗೂ ತನ್ನ ಕಾರಿನ ಉದ್ದವನ್ನ ತಾಳೆ ಹಾಕುತ್ತಾಳೆ.
ಮಹಿಳೆಯ ಸಾಕಷ್ಟು ಪ್ರಯತ್ನದ ಬಳಿಕವೂ ಕಾರನ್ನ ಪಾರ್ಕ್ ಮಾಡೋಕೆ ಆಕೆಯಿಂದ ಸಾಧ್ಯವಾಗೋದಿಲ್ಲ. ಕೊನೆಗೆ ಇನ್ನೊಬ್ಬ ಮಹಿಳೆ ಈಕೆಯ ಸಹಾಯಕ್ಕೆ ನಿಲ್ಲುತ್ತಾಳೆ. ಈಕೆಯ ಕಾರ್ನ್ನು ಸರಿಯಾಗಿ ಪಾರ್ಕ್ ಸಹ ಮಾಡುತ್ತಾಳೆ. ಆದರೆ ಈ ವಿಡಿಯೋದ ಕೊನೆಯಲ್ಲಿರುವ ಟ್ವಿಸ್ಟ್ ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಸಹಾಯ ಮಾಡಿದ್ದ ಮಹಿಳೆ ಅಸಲಿಗೆ ಹಿಂಬದಿ ನಿಂತಿದ್ದ ಕಾರಿನ ಮಾಲೀಕೆ ಆಗಿದ್ದಳು.
ಈಕೆ ಕಾರು ಪಾರ್ಕ್ ಮಾಡ್ತಿದ್ದಂತೆಯೇ ತನ್ನ ಕಾರನ್ನ ಹತ್ತಿ ಆಕೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ. ಆದರೆ ಇಷ್ಟೊತ್ತು ಇನ್ನಿಲ್ಲದ ಹರಸಾಹಸ ಪಟ್ಟಿದ್ದ ಮಹಿಳೆ ಆಕೆ ಕಾರು ಹತ್ತಿ ಹೋಗಿದ್ದನ್ನ ಕಂಡು ಶಾಕ್ ಆಗಿದ್ದಾಳೆ. ಈ ವಿಡಿಯೋ ಕಂಡು ಕೆಲವರು ಹೊಟ್ಟೆ ಹುಣ್ಣಾಗುವಷ್ಟು ನಕ್ಕರೆ ಮತ್ತೆ ಕೆಲವರು ಮತ್ತೋರ್ವ ಮಹಿಳೆ ಮಾಡಿದ ಸಹಾಯಕ್ಕೆ ಶಹಬ್ಬಾಸ್ ಹೇಳಿದ್ದಾರೆ.