ಮದುವೆಯಾಗಲು ನಿರಾಕರಿಸಿದ ಸಹೋದರಿಯರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕುಂಚೇವು ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೋದರಿಯರಾದ ಯೋಗಿತಾ (22) ಹಾಗೂ ಅಪ್ರಾಪ್ತೆ ಪುಷ್ಪಿತಾ (17) ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಗರಾಜ್ ಆಲಿಯಾಸ್ ನಾಗ ಮಚ್ಚಿನಿಂದ ಹಲ್ಲೆ ಮಾಡಿರುವ ಆರೋಪಿ.
ಕಳೆದ ಎರಡು ತಿಂಗಳ ಹಿಂದೆ ಸಹೋದರಿಯರ ತಂದೆ ಮೃತಪಟ್ಟಿದ್ದು, ಸಾವಿನ ಮನೆಯಲ್ಲಿ ಒಂದು ವರ್ಷದೊಳಗೆ ಶುಭಕಾರ್ಯ ಮಾಡಬೇಕೆಂಬ ಸಂಪ್ರದಾಯವಿದ್ದು, ಸಹೋದರಿಯರ ಸೋದರಮಾವ ನಾಗರಾಜ್ ತಾಯಿ ಹೇಮಲತಾ ಅವರೊಂದಿಗೆ ಯೋಗಿತಾ ಮನೆಗೆ ಬಂದು ತಮ್ಮ ದಿನೇಶ್ ಗೆ ಯೋಗಿತಾಳನ್ನು ಮದುವೆ ಮಾಡಿ ಕೊಡುವಂತೆ ಕೇಳಿದ್ದಾನೆ.
ಮನೆಯ ಹಿರಿಯ ಮಗಳಾದ ನನ್ನ ಮೇಲೆ ಸಂಸಾರದ ಜವಾಬ್ದಾರಿ ಇದೆ ಸದ್ಯಕ್ಕೆ ನಾನು ಮದುವೆಯಾಗುವುದಿಲ್ಲ, ತಂಗಿಯನ್ನು ಚೆನ್ನಾಗಿ ಓದಿಸಬೇಕು, ಅಲ್ಲದೆ ಪದವಿ ಓದಿರುವ ನಾನು ನಿನ್ನ ತಮ್ಮನನ್ನು ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದ ನಾಗರಾಜ್ ನಿನ್ನ ತಂಗಿಯನ್ನಾದರೂ ನನ್ನ ತಮ್ಮನಿಗೆ ಮದುವೆ ಮಾಡಿಕೊಡು ಎಂದು ಒತ್ತಾಯಿಸಿದ್ದು, ಇದಕ್ಕೂ ಸಹೋದರಿಯರಿಬ್ಬರು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ನಾಗ ಮಚ್ಚಿನಿಂದ ಸಹೋದರಿಯರ ಮೇಲೆ ಹಲ್ಲೆ ಮಾಡಿದ್ದಾನೆ.
ಘಟನೆ ಸಂಬಂಧ ಹಲ್ಲೆ ಆರೋಪಿ ನಾಗರಾಜ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಅಜ್ಜಿ ಪುಟ್ಟಮ್ಮ, ಸೋದರತ್ತೆ ಅಕ್ಕಮ್ಮನನ್ನು ಕೂಡ ಬಂಧಿಸಲಾಗಿದೆ.
ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.