ಚಾಮರಾಜನಗರ: ನಾವು ಇರುವ ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿ ನಮಗೆ ಸರಿಯಾಗಿ ಊಟದ ವ್ಯವಸ್ಥೆ ಇಲ್ಲ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ ಎಂದು ಕೋವಿಡ್ ಸೋಂಕಿತರ ಅಳಲು ವೀಡಿಯೋ ಈಗ ವೈರಲ್ ಆಗಿದೆ. ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯ ಸರ್ಕಾರಿ ಅರ್ಚರಿ ಮತ್ತು ಫೆನ್ಸಿಂಗ್ ಸ್ಕೂಲ್ ನಲ್ಲಿರುವ ಕೋವಿಡ್ ಕೇರ್ ಸೆಂಟರ್ ನ ಸೋಂಕಿತರೇ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಕೋವಿಡ್ ಕೇರ್ ಸೆಂಟರ್ನಲ್ಲಿ 62 ಜನ ಸೋಂಕಿತರಿದ್ದು, ನಮಗೆಲ್ಲ ಕೇವಲ 5 ಶೌಚಾಲಯಗಳಿವೆ. ಇದನ್ನು ಸ್ವಚ್ಚಮಾಡುವವರೇ ಇಲ್ಲ. ಕೋವಿಡ್ ಕೇರ್ ಸೆಂಟರ್ ಸ್ವಚ್ಚ ಮಾಡುವಂತೆ ಇಲ್ಲಿನ ಸಿಬ್ಬಂದಿಗಳಿಗೆ ಕೇಳಿಕೊಂಡರೆ ನೀವೆ ಸ್ವಚ್ಛಮಾಡಿಕೊಳ್ಳಿ ಎಂದು ಬೇಜವಾಬ್ದಾರಿಯಿಂದ ಹೇಳುತ್ತಾರೆ. ಸೋಂಕಿತರಾದ ನಮಗೆ ಮೆನುವಿನಲ್ಲಿ ತಿಳಿಸಿರುವಂತೆ ಊಟ, ತಿಂಡಿ, ಕಾಫಿ, ಟೀ ನೀಡುತ್ತಿಲ್ಲ. ನೀರಿನಂತೆ ಕಾಫಿ ಕೊಡುತ್ತಾರೆ.
ಪ್ರತಿ ದಿನ ಊಟಕ್ಕೆ ನೀಡುವ ಅನ್ನ, ಸಾಂಬರ್, ಚಪಾತಿ ಅರ್ಧ ಬೆಂದಿರಲಿವೆ. ತಿನ್ನಲು ಆಗುವುದಿಲ್ಲ. ಕೇಳಿದರೆ ನಿಮಗೆ ವೈದ್ಯರು ಪತ್ಯಾ ಆಹಾರ ಹೇಳಿದ್ದಾರೆ ಎಂದು ನಮಗೆ ಕೆಲಸಕ್ಕೆ ಬಾರದ ಮಾತನಾಡುತ್ತಾರೆ. ಪತ್ಯಾ ಆಹಾರವೆಂದು ಮಂಗಳೂರು ಸೌತೆಯಿಂದ ಸಾಂಬಾರ್ ಹಾಗೂ ಮಜ್ಜಿಗೆ ಕೊಡ್ತಾರೆ. ಈ ಊಟದಿಂದ ಕೆಮ್ಮು ಹೆಚ್ಚಾಗುತ್ತಿದ್ದು, ನಾವು ಮತ್ತೆ ರೋಗಿಗಳಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿದ್ದಾರೆ.
ಇನ್ನು ಇತ್ತೀಚೆಗಷ್ಟೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಎಲ್ಲವೂ ಸರಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿಕೊಂಡಿದ್ದರು. ಆದರೆ ಸಂತೇಮರಹಳ್ಳಿಯ ಸರ್ಕಾರಿ ಅರ್ಚರಿ ಮತ್ತು ಫೆನ್ಸಿಂಗ್ ಸ್ಕೂಲ್ ನಲ್ಲಿರುವ ಕೋವಿಡ್ ಕೇರ್ ಸೆಂಟರಿನಲ್ಲಿರುವ ಸೋಂಕಿತರ ವೀಡಿಯೋ ನೋಡಿದ್ರೆ ಸಮಸ್ಯೆಗೆ ಯಾರು ಹೊಣೆ ? ಎಂಬ ಸಂಶಯಗಳು ಮೂಡಿವೆ.