ಮಂಗಳೂರು : ಆಟೋ ಬಿಡಿ ಭಾಗಗಳ ಅಂಗಡಿಯೊಂದು ಬೆಂಕಿಗಾಹುತಿಯಾಗಿರುವ ಘಟನೆ ಮಂಗಳೂರಿನ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ನಡೆದಿದೆ. ಓವರ್ ಬ್ರಿಡ್ಜ್ ಬಳಿ ಇರುವ ಗೋಲ್ಡನ್ ಸ್ಪೇರ್ ಪಾರ್ಟ್ಸ್ ಅಂಗಡಿಯಲ್ಲಿ ಈ ಅವಘಡ ಸಂಭವಿಸಿದೆ.
ಮುಚ್ಚಿದ್ದ ಅಂಗಡಿಯಲ್ಲಿ ದಟ್ಟವಾಗಿ ಹೊಗೆ ಆವರಿಸಿರುವುದನ್ನು ಕಂಡ ಸ್ಥಳೀಯರು ಶಟರ್ ತೆರೆದು ನೋಡಿದಾಗ ಬೆಂಕಿ ತಗಲಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಸೇರಿ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ಬೆಂಕಿ ಅಂಗಡಿಗೆ ಸಂಪೂರ್ಣ ವ್ಯಾಪಿಸಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿದ್ದು, ಉಳ್ಳಾಲ ಪೊಲೀಸರು ಸ್ಥಳದಲ್ಲಿ ಜಮಾಯಿಸಿರುವ ಜನರನ್ನು ಚದುರಿಸಿದರು.