ಚಾಮರಾಜನಗರದಲ್ಲಿ ಕಳೆದ 24 ಗಂಟೆಗಳಲ್ಲಿ 20 ಮಂದಿ ಸೋಂಕಿತರು ಕೊರೊನಾಗೆ ಅಸುನೀಗಿದ್ದಾರೆ.
ಕಳೆದ 24 ಗಂಟೆಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 6 ಮಂದಿ ಸಿಎಲ್ ಎಸ್ ರೋಗಿಗಳು ಸಾವನ್ನಪ್ಪಿದ್ದು, 14 ಮಂದಿ ಸೋಂಕಿತರು ಉಸಿರಾಟ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸೋಂಕಿತರ ಸಾವುಗಳಲ್ಲಿ ರಾತ್ರಿ ವೇಳೆಯೇ ಹೆಚ್ಚು ಮಂದಿ ಮೃತಪಡುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಮೃತರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ 24 ರೋಗಿಗಳು ಉಸಿರು ಚೆಲ್ಲಿದ್ದರು. ಆಕ್ಸಿಜನ್ ಕೊರತೆಯಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿತ್ತು. ಬಳಿಕ ಮಾಧ್ಯಮಗೋಷ್ಠಿ ನಡೆಸಿದ್ದ ವೈದ್ಯಕೀಯ ಮತ್ತು ಆರೋಗ್ಯ ಸಚಿವ ಸುಧಾಕರ್, ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದು ಕೇವಲ ಮೂವರು ರೋಗಿಗಳು ಮಾತ್ರ ಎಂದು ಸ್ಪಷ್ಟನೆ ನೀಡಿದ್ದರು. ಸರ್ಕಾರದ ಮಾಹಿತಿ ತಳ್ಳಿಹಾಕಿದ್ದ ಪ್ರತಿಪಕ್ಷ ನಾಯಕರು, ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿ, ಪರಿಶೀಲಿಸಿದ್ದರು. ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಬರೋಬ್ಬರಿ 34 ಮಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಸಚಿವರು ಸುಳ್ಳು ಮಾಹಿತಿ ನೀಡಿ, ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಕೋವಿಡ್ 2ನೇ ಅಲೆ ಪ್ರಾರಂಭವಾದ ನಂತರ ಜಿಲ್ಲೆಯಲ್ಲಿ ಬರೋಬ್ಬರಿ 113 ಮಂದಿ ಸಾವನ್ನಪ್ಪಿದ್ದು, ಕೋವಿಡ್ ಆಸ್ಪತ್ರೆ ಮೃತ್ಯುಕೂಪವಾಗಿ ಮಾರ್ಪಟ್ಟಿದೆ.