ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ನಗರದಲ್ಲಿರುವ ಸಹಕಾರ ಸಾರಿಗೆ ಸಂಸ್ಥೆಯ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಅಧಿಕಾರಿಗಳು ಕಂಪನಿಯ ಗೇಟಿಗೆ ಬೀಗಮುದ್ರೆ ಹಾಕಿದ್ದಾರೆ. ಕೊಪ್ಪ ನಗರದ ಕೆಸವೆ ರಸ್ತೆಯಲ್ಲಿರುವ ಸಹಕಾರ ಸಾರಿಗೆ(ಟಿಸಿಎಸ್) ಸಂಸ್ಥೆಯ ಆಡಳಿತ ವರ್ಗವೂ ಸಾಲವನ್ನು ಮರು ಪಾವತಿ ಮಾಡದ ಹಿನ್ನಲೆ, ಜಿಲ್ಲಾಧಿಕಾರಿಗಳ ಆದೇಶದ ಮೆರೆಗೆ ಶ್ರೀರಾಮ್ ಟ್ರಾನ್ಸ್ಫೋರ್ಟ್ ಕಂಪನಿಯೂ 1 ಎಕರೆ 10 ಗುಂಟೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಸಂಸ್ಥೆಯ ಅಧ್ಯಕ್ಷರಾದ ಈ.ಎಸ್ ಧರ್ಮಪ್ಪ ಹಾಗೂ ಆಡಳಿತ ನಿರ್ದೆಶಕರಾಗಿದ್ದ ಗಾಡ್ವಿನ್ ಜಯಪ್ರಕಾಶ್ ಅವರು ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಕೆಸವೆ ರಸ್ತೆಯಲ್ಲಿರುವ ಸಂಸ್ಥೆಯ ಆಸ್ತಿಯನ್ನು ಆಧಾರವಾಗಿ ನೀಡಿ 1 ಕೋಟಿಯ 20 ಲಕ್ಷ ಸಾಲವನ್ನು ಪಡೆದಿದ್ದರು. 2019 ರ ನಂತರ ಸಾಲವನ್ನು ಮರು ಪಾವತಿ ಮಾಡಿರಲಿಲ್ಲ.
ಕಂಪನಿಯೂ ಅವರಿಗೆ ನೋಟಿಸ್ ನೀಡಿದ್ದರು ಸಹ ಬಡ್ಡಿ ಸಹಿತ 1,31,41,210 ಮೊತ್ತವನ್ನು ಮರು ಪಾವತಿ ಮಾಡಲು ಹಿಂದೇಟು ಹಾಕಿದ್ದ ಕಾರಣ, ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಅವರ ಆದೇಶದ ಅನ್ವಯ ತಾಲೂಕು ದಂಡಾಧಿಕಾರಿ ಹೆಚ್.ಎಸ್ ಪರಮೇಶ್ ಸಮ್ಮುಖದಲ್ಲಿ ಕೆಸವೆ ರಸ್ತೆಯ ಸರ್ವೆ ನಂ 97 ರಲ್ಲಿರುವ 1 ಎಕರೆ 10 ಗುಂಟೆ ಟಿಸಿಎಸ್ ಸಂಸ್ಥೆಯ ಆಸ್ತಿತಿಯನ್ನು ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿ ವಶಕ್ಕೆ ತೆಗೆದುಕೊಂಡಿದೆ. ಕಛೇರಿಗೆ ಪ್ರವೇಶಿಸದಂತೆ ಬೀಗಮುದ್ರೆ ಹಾಕಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀ ರಾಮ್ ಟ್ರಾನ್ಸ್ಪೋರ್ಟ್ ಕಂಪನಿಯ ಮ್ಯಾನೇಜರ್ ಸಂತೃಪ್ತ ಈ ಕುರಿತು ಮಾತನಾಡಿದ್ದು, 2019 ರ ನಂತರ ಸಂಸ್ಥೆಯೂ ಸಾಲವನ್ನು ಪಾವತಿ ಮಾಡಿಲ್ಲ. ನಾವು ಹಲವು ಭಾರಿ ನೋಟಿಸ್ ನೀಡಿದ್ದೇವೆ. ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಲಾಗಿತ್ತು. ಜಿಲ್ಲಾಧಿಕಾರಿ ಮುಟ್ಟುಗೋಲು ಹಾಕಿಕೊಳ್ಳು ಆದೇಶ ಮಾಡಿದ್ದಾರೆ. ಅದರಂತೆ ತಾಲೂಕು ಮ್ಯಾಜಿಸ್ಟ್ರೇಟ್ ವಶಕ್ಕೆ ಪಡೆದು ನಮಗೆ ಹಸ್ತಾಂತರ ಮಾಡಿದ್ದಾರೆ. ನಂತರದಲ್ಲಿ ಹರಾಜು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.