ಸಿಬಿಎಸ್ ಇ 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಜೊತೆ ನಡೆಸಿದ ಸಂವಾದದ ನಂತರ ಕೇಂದ್ರ ಸರಕಾರ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ.
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಂದು 1.84 ಲಕ್ಷ ಪ್ರಕರಣಗಳು ವರದಿಯಾಗಿತ್ತು. ಅಲ್ಲದೇ ಕಳೆದ ಒಂದು ವಾರದಲ್ಲಿ ಪ್ರತಿ ದಿನ 1 ಲಕ್ಷಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಈ ನಿರ್ಧಾರ ಕೈಗೊಂಡಿದೆ.
ಮೇ 4ರಿಂದ ಸಿಬಿಎಸ್ ಇ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳು ಆರಂಭವಾಗಬೇಕಿತ್ತು. ಜೂನ್ 7ರಂದು 10ನೇ ತರಗತಿ ಪರೀಕ್ಷೆ ಮುಗಿದರೆ, ನಾಲ್ಕು ದಿನಗಳ ನಂತರ 12ನೇ ತರಗತಿ ಪರೀಕ್ಷೆಗಳು ಮುಗಿಯಬೇಕಿತ್ತು. ಇದೀಗ 12ನೇ ತರಗತಿ ಪರೀಕ್ಷೆ ಮುಂದೂಡಿದ್ದರೂ ಹೊಸ ವೇಳಾಪಟ್ಟಿ ನಂತರ ಪ್ರಕಟವಾಗಲಿದೆ.