ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಹುಮ್ನಾಬಾದ್ ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಇಲ್ಲದೆ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ. ಇದಕ್ಕೆ ಜನರ ಸಹಕಾರ ಬೇಕು ಎಂದರು.
ಕಳೆದ ಬಾರಿ ಕೊರೊನಾ ಬಂದಾಗ ಏನಾಗಿತ್ತು ಎಂಬುದರ ಅರಿವು, ಅನುಭವ ನಮಗಿದೆ. ಅದರ ಆಧಾರದ ಮೇಲೆ ಲಾಕ್ ಡೌನ್ ಜಾರಿಗೊಳಿಸದೆ ನಿಯಂತ್ರಣಕ್ಕೆ ನಾವು ಮೊದಲ ಆದ್ಯತೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ. ಇದರ ಜೊತೆಗೆ ಹಲವಾರು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಜಾರಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸಹಕರಿಸಿದರೆ ಕೊರೊನಾ ತಡೆಗಟ್ಟುವುದು ಸಾಧ್ಯ. ಇದಕ್ಕೆ ಜನರ ಸಂಪೂರ್ಣ ಸಹಕಾರವನ್ನು ಕೋರುತ್ತೇನೆ ಎಂದು ಮನವಿ ಮಾಡಿದರು.