ಬೆಂಗಳೂರು : ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ತಮ್ಮ 3 ತಿಂಗಳ ವೇತನವನ್ನು ಆಶಾ ಕಾರ್ಯಕರ್ತೆಯರಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಶಾಸಕ ಗಣೇಶ್ ಹುಕ್ಕೇರಿ, ಕೋವಿಡ್ ಪರಿಹಾರ ನಿಧಿಗೆ 1 ತಿಂಗಳ ವೇತನ ಹಾಗೂ ಮುಂದಿನ ಮೂರು ತಿಂಗಳ ವೇತನವನ್ನು ತಮ್ಮ ಕ್ಷೇತ್ರದ ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ನೀಡುವುದಾಗಿ ತಿಳಿಸಿದ್ದಾರೆ.
ಇಂದು ಮೇ 1 ಕಾರ್ಮಿಕ ದಿನಾಚರಣೆ. ಎಲ್ಲರಿಗೂ ಕಾರ್ಮಿಕ ದಿನಾಚರಣೆ ಶುಭಾಷಯಗಳು. ಕೊರೊನಾ ಮಹಾಮಾರಿ ಹೊಡೆದೋಡಿಸಲು ಹಲವಾರು ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ. ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುವ ಕಾರ್ಮಿಕರಲ್ಲಿ ನಮ್ಮ ಆಶಾ ಕಾರ್ಯಕರ್ತರ ಪಾತ್ರ ಮುಖ್ಯವಾದದ್ದು.
ಆರೋಗ್ಯ, ನೈರ್ಮಲ್ಯದ ಬಗ್ಗೆ ಸಮುದಾಯಕ್ಕೆ ತಿಳುವಳಿಕೆ ನೀಡುವುದರಿಂದ ಹಿಡಿದು ಕ್ಷೇತ್ರದ ನಾಗರಿಕರಿಗೆಲ್ಲರಿಗೂ ಕೊರೊನಾ ಲಸಿಕೆ ಹಾಕಿಸುವವರೆಗೂ ಹಲವಾರು ಜವಾಬ್ದಾರಿ ವಹಿಸುವ ಇವರ ಕಾರ್ಯ ಶ್ಲಾಘನೀಯ ಹೀಗಾಗಿ ಕಾರ್ಯಕರ್ತರಿಗೆ ನನ್ನ ಒಂದು ಪುಟ್ಟ ಕಾಣಿಕೆ ಎಂದು ಹೇಳಿದ್ದಾರೆ.