ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಚೈನ್ ಲಿಂಕ್ ಬ್ರೇಕ್ ಮಾಡಲು 14 ದಿನ ರಾಜ್ಯದಲ್ಲಿ ಬಿಗಿ ಕ್ರಮಕ್ಕೆ ಸರ್ಕಾರ ಒತ್ತು ನೀಡಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸರ್ವಪಕ್ಷಗಳ ಸಭೆಯ ಬಳಿಕ ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ರವರೆಗೆ ನೈಟ್ ಕರ್ಪ್ಯೂ, ಮತ್ತು ವೀಕೆಂಡ್ ಕರ್ಪ್ಯೂ ತರಲಾಗಿದೆ ಎಂದರು.
ಕೊರೊನಾ ವೈರಸ್ ಚೈನ್ ಲಿಂಕ್ ತಪ್ಪಿಸಲು 14 ದಿನ ಬೇಕಾಗಿದೆ. ಹೀಗಾಗಿ 14 ದಿನ ಬಿಗಿ ಕ್ರಮಕ್ಕೆ ಸರ್ಕಾರ ಒತ್ತು ನೀಡಿದೆ. ರಾಜ್ಯದ ಜನರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಈಗ 23 ಸಾವಿರ ರೆಮ್ಡೆಸಿವರ್ ಚುಚ್ಚುಮದ್ದುಗಳು ಬಂದಿವೆ. ಸರ್ಕಾರಿ ಆಸ್ಪತ್ರೆಗಳಿಗೆ 10 ಸಾವಿರ ರೆಮ್ಡೆಸಿವರ್ ಸಿಕ್ಕರೆ, ಖಾಸಗಿ ಆಸ್ಪತ್ರೆಗಳಿಗೆ 13 ಸಾವಿರದಷ್ಟನ್ನು ಪೂರೈಸಲಾಗಿದೆ. ಕೇವಲ 10 ಸಾವಿರ ರೆಮ್ಡೆಸಿವರ್ಗಳನ್ನು ಮಾತ್ರ ಹೊರ ರಾಜ್ಯಗಳಿಗೆ ಕೊಡಲಾಗಿದೆ ಎಂದು ಸಚಿವರು ತಿಳಿಸಿದರು.