ಬೆಂಗಳೂರು : ನಾವು ಕೊರೊನಾ ವಿಷಯದಲ್ಲಿ ರಾಜಕಾರಣ ಮಾಡಬಾರದು ಅಂತ ಸುಮ್ಮನೆ ಇದ್ದೇವೆ. ಇದು ಸರ್ಕಾರದ ಸಂಪೂರ್ಣ ವೈಫಲ್ಯ. ಈ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೊರೊನಾ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಕೊರೊನಾ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ದೇವರೇ ಕಾಪಾಡಬೇಕು. ಸರ್ಕಾರ ಏನೂ ಮಾಡುತ್ತಿಲ್ಲ. ಪ್ರಧಾನಿ ಮೋದಿಯವರು ತಮ್ಮ ದೊಡ್ಡಸ್ಥಿಕೆ ತೋರಿಸುವುದಕ್ಕೆ ಹೊರದೇಶಕ್ಕೆ ಔಷಧಿ ಕಳಿಸಿ ನಮ್ಮ ಜನರನ್ನು ಕಷ್ಟಕ್ಕೆ ಸಿಲುಕಿಸಿದ್ದಾರೆ. ಮೊದಲು ನಿಮಗೆ ಮತ ನೀಡದವರಿಗೆ ಔಷಧಿ ಕೊಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ.
ನಾವು ಸರ್ಕಾರಕ್ಕೆ ನಮ್ಮ ಅಭಿಪ್ರಾಯ ಏನಿತ್ತು ಎಂಬುದನ್ನು ಹೇಳಿದ್ದೆವು. ತಜ್ಞರ ಸಮಿತಿಯ ಅಭಿಪ್ರಾಯದಂತೆ ಹೋಗಬೇಕು, ಲಾಕ್ ಡೌನ್ ಮಾಡಬೇಕು ಎಂಬುದು ಸರ್ಕಾರದ ಚಿಂತನೆ ಆಗಿತ್ತು ಎನಿಸುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಸಲಹೆಯಂತೆ ಅವರು ಲಾಕ್ ಡೌನ್ ಮಾಡಿಲ್ಲ. ಸರ್ಕಾರದ ವೈಫಲ್ಯದ ಬಗ್ಗೆ ನಾನು ನಿನ್ನೆ ಹೇಳಿದ್ದೇನೆ. ಸರ್ಕಾರ ವಿಫಲವಾಗಿರುವುದಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳೇ ಸಾಕ್ಷಿ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ನಿನ್ನೆ ಪಿಎಂ ನರೇಂದ್ರ ಮೋದಿ ಮಾಡಿದ್ದು ಭಾಷಣವಲ್ಲ, ಪ್ರವಚನ. ಸರ್ಕಾರದ ವೈಫಲ್ಯಗಳನ್ನು ನಿನ್ನೆ ರಾಜ್ಯಪಾಲರ ಮುಂದೆ ಹೇಳಿದ್ದೆ. ಮಲ್ಲಿಕಾರ್ಜುನ ಖರ್ಗೆ ಹೇಳಿದ ಹಾಗೆ ಪ್ರಧಾನಿ ಮೋದಿ ಪ್ರವಚನ ಮಾಡಿದ್ದಾರೆ. ರಾಜ್ಯದಲ್ಲಿ ಬೆಡ್ ಗಳು, ಆಕ್ಸಿಜನ್ ಕೊರತೆ ಸಾಕಷ್ಟು ಕಾಡುತ್ತಿದೆ. ಒಬ್ಬ ಸಚಿವರು ಕೂಡ ಜಿಲ್ಲೆಗಳಿಗೆ ಹೋಗಿ ಕೋವಿಡ್ ಬಗ್ಗೆ ಸಭೆ ಮಾಡಿಲ್ಲ ಎಂದರು.