ಬೆಂಗಳೂರು : ನವೆಂಬರ್ ಒಳಗೆ ಎಲ್ಲರಿಗೂ ಲಸಿಕೆ ಲಭ್ಯವಾಗಲಿದೆ. ನಮ್ಮ ರಾಜ್ಯದ ಎಲ್ಲರಿಗೂ ಲಸಿಕೆ ಸಿಗಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವ್ಯಾಕ್ಸಿನ್ ನಮ್ಮ ರಾಜ್ಯದಲ್ಲೇ ಉತ್ಪಾದನೆಯಾಗಲಿದೆ. ಭಾರತ್ ಬಯೋಟೆಕ್ ಇದನ್ನ ಉತ್ಪಾದನೆ ಮಾಡಲಿದೆ. ಅವರ ಜೊತೆ ಮಾತುಕತೆ ನಡೆಸಿದ್ದೇವೆ. ಶೀಘ್ರದಲ್ಲೇ ಲಸಿಕೆ ಕೊಡುವ ಭರವಸೆ ಕೊಟ್ಟಿದೆ. ರಷ್ಯಾದ ಸ್ಪುಟ್ನಿಕ್ ವಿ ಕೂಡ ಇಲ್ಲೇ ಉತ್ಪಾದನೆಯಾಗಲಿದೆ. ಹೀಗಾಗಿ ದೇಶದಲ್ಲಿ ಮೊದಲು ನಮಗೆ ಲಸಿಕೆ ಲಭ್ಯವಾಗಲಿದೆ ಎಂದರು.
ಇನ್ನು ಮುಂದಿನ ವಾರ ಹೆಚ್ಚು ವಯಲ್ಸ್ ಸಿಗಲಿದೆ. ತುರ್ತು 500 ವಯಲ್ಸ್ ನೀಡುವಂತೆ ಕೇಂದ್ರವನ್ನು ಕೇಳಿದ್ದೇವೆ. ಹಾಗಾಗಿ ಲಸಿಕೆ ಸಮಸ್ಯೆ ಅರ್ಧ ಬಗೆಹರಿಯಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯಕ್ಕೆ 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ :
ರಾಜ್ಯಕ್ಕೆ 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದೆ. ರಾಜ್ಯ ಸರ್ಕಾರದ ನೇರ ಖರೀದಿ ಪ್ರಕ್ರಿಯೆ ಅಡಿಯಲ್ಲಿ ಈ ಲಸಿಕೆ ಬಂದಿದೆ, ಸದ್ಯ ಆನಂದರಾವ್ ವೃತ್ತದಲ್ಲಿರುವ ರಾಜ್ಯ ಉಗ್ರಾಣದಲ್ಲಿ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು.
ಕೊರೊನಾ ಎರಡನೇ ಅಲೆಯ ಆರ್ಭಟದ ಮಧ್ಯೆ ರಾಜ್ಯದಲ್ಲಿ ಲಸಿಕೆ ಅಭಾವ ಕೂಡ ಹೆಚ್ಚಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಲಸಿಕೆ ಖರೀದಗೆ ಜಾಗತಿಕ ಟೆಂಡರ್ ಅನ್ನ ಕರೆದಿದೆ. ವಾಕ್ಸಿನ್ ಖರೀದಿಗೆ ಯಾವೆಲ್ಲಾ ಮಾರ್ಗಗಳು ಇದೆಯೋ ಅವೆಲ್ಲವನ್ನೂ ಬಳಸಿಕೊಳ್ಳುತ್ತಿದೆ. ಅದರಂತೆ ಇದೀಗ 2 ಲಕ್ಷ ಕೋವಿಶೀಲ್ಡ್ ಲಸಿಕೆ ಬಂದಿದೆ. ಮೊನ್ನೆಯಷ್ಟೇ ಕೇಂದ್ರ ಸರ್ಕಾರ 75 ಸಾವಿರ ಡೋಸ್ ಕೋವ್ಯಾಕ್ಸಿನ್ ಅನ್ನು ರಾಜ್ಯಕ್ಕೆಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿದೆ ಎಂದರು.