ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಹಿರಿಯ ಪುತ್ರ 35 ವರ್ಷದ ಅಭಿಷೇಕ್ ಯೆಚೂರಿ ಕೊರೊನಾ ವೈರಸ್ ಬಲಿಯಾಗಿದ್ದಾರೆ.
ಸೀತಾರಾಮ್ ಟ್ವಿಟರ್ ನಲ್ಲಿ ಗುರುವಾರ ಬೆಳಿಗ್ಗೆ ಈ ವಿಷಯ ಘೋಷಿಸಿದ್ದು, ನನ್ನ ಹಿರಿಯ ಮಗ ಅಭಿಷೇಕ್ ಯೆಚೂರಿ ಇಂದು ಬೆಳಿಗ್ಗೆ ನಮ್ಮನ್ನು ಅಗಲಿದ್ದಾನೆ ಎಂದು ಹೇಳಲು ದುಃಖವಾಗುತ್ತಿದೆ. ಆತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ವೈದ್ಯರು, ಸ್ಯಾನಿಟೈಸರ್ ವರ್ಕರ್ಸ್, ಆರೋಗ್ಯ ಕಾರ್ಯಕರ್ತರು ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಅಭಿಷೇಕ್ ಗೆ ಎರಡು ವಾರಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಗುರುಗಾಂವ್ ವೇದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವೇ ದಿನಗಳಲ್ಲಿ ಚೇತರಿಸಿಕೊಂಡಿದ್ದರು. ಆದರೆ ಗುರುವಾರ ಮುಂಜಾನೆ 5.20ರ ಸುಮಾರಿಗೆ ನಿಧನರಾದರು. ಅವರು ಪತ್ನಿ ಸ್ವಾತಿ ಅವರನ್ನು ಅಗಲಿದ್ದಾರೆ.
ಅಭಿಷೇಕ್ ಚೆನ್ನೈನಲ್ಲಿ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ ವಿದ್ಯಾಭ್ಯಾಸ ಮಾಡಿದ್ದು, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪತ್ರಕರ್ತನಾಗಿ ಕಾರ್ಯ ನಿರ್ವಹಿಸಿದ್ದರು.
ಯೆಚೂರಿ ಪುತ್ರ ಅಭಿಷೇಕ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಪಕ್ಷಗಳ ಮುಖಂಡರು ಶೋಕ ವ್ಯಕ್ತಪಡಿಸಿದ್ದಾರೆ.