ಕೋಲಾರ : ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ವಿಷಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದಾರೆ.ಕೋಲಾರದ ತಮ್ಮ ನಿವಾಸದಲ್ಲಿ ಬೆಳಗ್ಗೆ 5 ಗಂಟೆ ಸಮಯದಲ್ಲಿ ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿದ್ದ ಚೈತ್ರಾ ಕೊಟ್ಟೂರು ಅವರನ್ನು ಕೋಲಾರದ ETCM ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪರಿಣಾಮ ಚೈತ್ರಾ ಕೊಟ್ಟೂರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಮಾರ್ಚ್ 28ರಂದು ಮಂಡ್ಯ ಮೂಲದ ಉದ್ಯಮಿ ನಾಗರ್ಜುನ್ ಅವರನ್ನು ಬ್ಯಾಟರಾಯನ ಪುರದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು. ವಿವಾಹವಾದ ಕೆಲವೇ ಗಂಟೆಗಳಲ್ಲಿ ಇದು ಒತ್ತಾಯ ಪೂರ್ವಕ ಮದುವೆ ಎಂದು ನಾಗರ್ಜುನ ಚೈತ್ರಾ ಅವರನ್ನು ತೊರೆದು ಹೋಗಿದ್ದರು. ಅಲ್ಲದೇ, ಈ ಪ್ರಕರಣ ಸಂಬಂಧ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು.
ನಂತರ ಮಾತುಕತೆಗೆ ಬರುವುದಾಗಿ ನಾಗಾರ್ಜುನ್ ಮತ್ತು ಪೋಷಕರು ತಿಳಿಸಿದ್ದರು. ನಾಗಾರ್ಜುನ್ ಕುಟುಂಬ ಮಾತುಕತೆಗೆ ಬಾರದೆ ನಿರ್ಲಕ್ಷ್ಯ ಮಾಡಿದ್ದಕ್ಕೆ ಈ ದುಡುಕಿನ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಚೈತ್ರಾ ಕೊಟ್ಟೂರು ಅವರು ಸಂಘಟನೆಗಳನ್ನ ಬಳಸಿಕೊಂಡು ತನ್ನನ್ನು ಬಲವಂತವಾಗಿ ಕೂಡಿಹಾಕಿ ದೇವಸ್ಥಾನದಲ್ಲಿ ಮದುವೆ ಮಾಡಿಸಲಾಗಿದೆ. ತನಗೆ ಮದುವೆ ಒಂಚೂರು ಇಷ್ಟವಿರಲಿಲ್ಲ. ಬೆದರಿಕೆಗೆ ಬಗ್ಗೆ ಚೈತ್ರಾಗೆ ತಾಳಿ ಕಟ್ಟಿದೆ ಎಂದು ನಾಗಾರ್ಜುನ್ ಹೇಳಿದ್ದರು. ನಾಗಾರ್ಜುನ್ ಕುಟುಂಬದವರು ಕೋಲಾರದ ಕುರುಬರ ಪೇಟೆಯಲ್ಲಿರುವ ಚೈತ್ರಾಳ ಮನೆಗೆ ಬಂದು ಗಲಾಟೆ ಮಾಡಿದ್ದರು. ನಂತರ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ಕೂಡ ದಾಖಲಿಸಿದ್ದರು.