ಮಂಗಳೂರು : ಹೆದ್ದಾರಿಯಲ್ಲಿ ದರೋಡೆಗೆ ಸಂಚು ರೂಪಿಸಿದ್ದ ಎಂಟು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರದ ಹೊರವಲಯದ ಉಲಾಯಿಬೆಟ್ಟು ಎಂಬಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, 2 ತಲವಾರು, 2 ಚೂರಿ, 1 ಡ್ರಾಗನ್ ಚೂರಿ, 8 ಮೊಬೈಲ್ ಫೋನ್, ಇನೋವಾ ಕಾರು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ತೌಸಿರ್, ಮೊಹಮ್ಮದ್ ಅರಾಫತ್, ತಸ್ಲಿಂ, ನಾಸೀರ್ ಹುಸೈನ್, ಮೊಹಮ್ಮದ್ ರಫೀಕ್, ಮೊಹಮ್ಮದ್ ಸಫ್ವಾನ್, ಮೊಹಮ್ಮದ್ ಜೈನುದ್ದೀನ್, ಉನೈಝ್ ಎಂದು ಗುರುತಿಸಲಾಗಿದೆ. ಆರೋಪಿಗಳು ಟಿಬಿ ಎಂಬ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದರು.ವಿದೇಶದಲ್ಲಿರುವ ರೌಡಿ ಬಾತಿಶ್, ತೌಸಿರ್ ಈ ಗ್ಯಾಂಗನ್ನು ಅಪರೇಟ್ ಮಾಡುತ್ತಿದ್ದರು.
ಹಣಕಾಸಿನ ಸೆಟ್ಲ್ ಮೆಂಟ್ ವ್ಯವಹಾರ ನಡೆಸುತ್ತಿದ್ದ ಈ ಗ್ಯಾಂಗ್ ಬೆಂಗಳೂರಿನಲ್ಲಿನ ಝೀಯದ್ ಎಂಬಾತನಿಂದ ಹಣ ವಸೂಲಿಗೆ ಕಾರಿನಲ್ಲಿ ತೆರಳಿದ್ದರು. ಝೀಯದ್ ಸಿಗದೆ ಬರಿಗೈಯಲ್ಲಿ ವಾಪಸಾಗಿದ್ದ ಈ ಗ್ಯಾಂಗ್ ಇಂದು ಮುಂಜಾನೆ ವಾಪಾಸಾಗಿ ಹೆದ್ದಾರಿ ದರೋಡೆಗೆ ಸ್ಕೆಚ್ ಹಾಕಿದ್ದರು. ಈ ವೇಳೆ ನೈಟ್ ಕರ್ಫ್ಯೂ ಬಗ್ಗೆ ಸ್ಪೆಷಲ್ ರೌಂಡ್ಸ್ ನಲ್ಲಿದ್ದ ಸಿಸಿಬಿ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಈ ಗ್ಯಾಂಗ್ ಸಿಕ್ಕಿಬಿದ್ದಿದೆ ಎಂದರು.