ಬೆಂಗಳೂರು: ರಾಜ್ಯದ ವಿವಿಧೆಡೆ ಮೋಡ ಕವಿದ ವಾತಾವರಣವಿದ್ದು, ಮುಂದಿನ ಎರಡು ದಿನ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಲಿದೆ.
ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಮಳೆಯಾಗಲಿದೆ. ಕರ್ನಾಟಕ ಮಾತ್ರವಲ್ಲದೇ, ತಮಿಳುನಾಡು, ತೆಲಂಗಾಣ, ಕೇರಳದಲ್ಲಿ ಸಹ ಮಳೆಯಾಗಲಿದೆ. ಅದರಲ್ಲೂ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ತೀರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಮೋಡ ಮುಸುಕಿದ ವಾತಾವರಣವಿದ್ದು ಸಂಜೆ ಅಥವಾ ನಾಳೆಯ ವೇಳೆಗೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎನ್ನಲಾಗಿದೆ.