ಬೆಂಗಳೂರು: ಯಲಹಂಕದಲ್ಲಿರುವ ಸಿಆರ್ಪಿಎಫ್ ಕೇಂದ್ರದಲ್ಲಿ ಇಂದು ಶೌರ್ಯ ದಿನಾಚರಣೆಯನ್ನು ಆಚರಿಸಲಾಯಿತು. 1965ರ ಏ.9ರಂದು ನಡೆದ ಯುದ್ಧದಲ್ಲಿ ಸಿಆರ್ಪಿಎಫ್ನ ಎರಡನೇ ಬೆಟಾಲಿಯನ್ ಹೋರಾಟ ಮಾಡಿ ಪಾಕ್ ಸೈನಿಕರನ್ನು ಸದೆಬಡಿದಿತ್ತು.
ಪಂಜಾಬ್ ಮತ್ತು ಪಾಕ್ ಗಡಿಯಲ್ಲಿರುವ ಸರ್ದಾರ್ ಪೋಸ್ಟ್ನಲ್ಲಿ ಪಾಕ್ ಸೇನೆಯ ವಿರುದ್ಧ ಹೋರಾಡುವಾಗ ಆರು ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದರ ನೆನಪಿಗಾಗಿ ಪ್ರತಿವರ್ಷ ಏ.9ರಂದು ಶೌರ್ಯ ದಿವಸ್ನ್ನು ಆಚರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಡಿಐಜಿ ಅಶೋಕ್ ಕುಮಾರ್ ಕನೋಜಿಯಾ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.
ಸಿಆರ್‌ಪಿಎಫ್ 1965 ರ ಇಂಡೋ-ಪಾಕ್ ಯುದ್ಧದ ಪ್ರಾರಂಭದಲ್ಲಿ ರಾನ್ ಆಫ್ ಕಚ್‌ನಲ್ಲಿ ನಡೆದ ಘಟನೆಯ ನೆನಪಿಗಾಗಿ ಏಪ್ರಿಲ್ 9 ಅನ್ನು ಶೌರ್ಯ ದಿನವನ್ನಾಗಿ ಆಚರಿಸುತ್ತದೆ
ಪಾಕಿಸ್ತಾನ ಸೇನೆಯು 18 ಪಂಜಾಬ್ ಬೆಟಾಲಿಯನ್, 8 ಫ್ರಾಂಟಿಯರ್ ರೈಫಲ್ಸ್ ಮತ್ತು 6 ಬಲೂಚ್ ಬೆಟಾಲಿಯನ್ ಅನ್ನು ಒಳಗೊಂಡಿತ್ತು. ಭಾರತದ ಭೂಪ್ರದೇಶವನ್ನು ವಶಪಡಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು.
ಸಿಆರ್ಪಿಎಫ್ನ ಎರಡು ಬೆಟಾಲಿಯನ್ಳು ಈ ಸಂದರ್ಭದಲ್ಲಿ ದೇಶ ರಕ್ಷಣೆಗೆ ಪಣ ತೊಟ್ಟು ಕಾರ್ಯ ನಿರ್ವಹಿಸಿದವು. ಸಿಆರ್ಪಿಎಫ್ ಯೋಧರ ಕಾರ್ಯತಂತ್ರದ ಫಲವಾಗಿ ಪಾಕ್ ಸೈನಿಕರು ಭಾರತದ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿ ವಿಫಲರಾದರು.
ಸುಮಾರು 12 ಗಂಟೆಗಳ ಕಾಲ ನಡೆದ ಕಾದಾಟದಲ್ಲಿ ಪಾಕಿಸ್ತಾನದ 34 ಸೈನಿಕರು ಅಸುನೀಗಿದರು. ಇಬ್ಬರು ಪಾಕ್ ಸೈನಿಕರನ್ನು ಸಿಆರ್ಪಿಎಫ್ ಯೋಧರು ವಶಕ್ಕೆ ತೆಗೆದುಕೊಂಡಿದ್ದರು. ಈ ಘಟನೆಯ ಸ್ಮರಣಾರ್ಥವಾಗಿ ಸಿಆರ್ಪಿಎಫ್ ಶೌರ್ಯ ದಿನವನ್ನು ಆಚರಿಸಲಾಗುತ್ತದೆ.