ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬುಧವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ತ್ರಿಬಲ್ ದಾಖಲೆ ಬರೆದಿದ್ದಾರೆ.
ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ವಾರ್ನರ್ 57 ರನ್ ಬಾರಿಸಿ ಔಟಾದರು. ಈ ಮೂಲಕ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದೂ ಅಲ್ಲದೇ ಐಪಿಎಲ್ ನಲ್ಲಿ 50ನೇ ಅರ್ಧಶತಕ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಅಲ್ಲದೇ 10,000 ರನ್ ಪೂರೈಸಿದ 4ನೇ ಆಟಗಾರ ಎನಿಸಿಕೊಂಡರು.
ಐಪಿಎಲ್ ನಲ್ಲಿ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೇ 50ನೇ ಅರ್ಧಶತಕ ಸಿಡಿಸಿದ ಮೊದಲಿಗ ಎನಿಸಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ 43 ಅರ್ಧಶತಕದೊಂದಿಗೆ 2ನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ 40 ಅರ್ಧಶತಕದೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ಚೆನ್ನೈ ವಿರುದ್ಧದ ಪಂದ್ಯದ 16ನೇ ಓವರ್ ನಲ್ಲಿ ವಾರ್ನರ್ ಐಪಿಎಲ್ ನಲ್ಲಿ 10,000 ರನ್ ಪೂರೈಸಿದ 4ನೇ ಆಟಗಾರ ಎನಿಸಿಕೊಂಡರು. ಪಂಜಾಬ್ ಕಿಂಗ್ಸ್ ತಂಡದ ಕ್ರಿಸ್ ಗೇಲ್ (13,839) ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡದ ಕೀರನ್ ಪೊಲಾರ್ಡ್ (10,694) ಮತ್ತು ಪಾಕಿಸ್ತಾನದ ಶೋಯೆಬ್ ಮಲಿಕ್ (10,488) ನಂತರದ ಎರಡು ಸ್ಥಾನಗಳಲ್ಲಿದ್ದಾರೆ.
ವಾರ್ನರ್ ಇದೇ ವೇಳೆ 200ನೇ ಸಿಕ್ಸರ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ 8ನೇ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಕೀರನ್ ಪೊಲಾರ್ಡ್ ಮುಂತಾದ ಆಟಗಾರರಿದ್ದಾರೆ.
ವಾರ್ನರ್ ಮತ್ತು ಮನೀಷ್ ಪಾಂಡೆ ಅರ್ಧಶತಕಗಳ ನೆರವಿನಿಂದ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 3 ವಿಕೆಟ್ ಗೆ 171 ರನ್ ಕಲೆ ಹಾಕಿತು.
ವಾರ್ನರ್ ಮತ್ತು ಮನೀಷ್ ಪಾಂಡೆ 2ನೇ ವಿಕೆಟ್ ಗೆ 106 ರನ್ ಜೊತೆಯಾಟ ನಿಭಾಯಿಸಿದರು. ಪಾಂಡೆ 46 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ 61 ರನ್ ಬಾರಿಸಿದರು. ವಾರ್ನರ್ 55 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 57 ರನ್ ಗಳಿಸಿದರು.
ಇವರಿಬ್ಬರ ನಿರ್ಗಮನದ ನಂತರ ಕೊನೆಯಲ್ಲಿ ಬಂದ ಕೇನ್ ವಿಲಿಯಮ್ಸನ್ 10 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರೆ, ಕೇದಾರ್ ಜಾಧವ್ 4 ಎಸೆತದಲ್ಲಿ ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 12 ರನ್ ಗಳಿಸಿ ತಂಡದ ಮೊತ್ತವನ್ನು ಉಬ್ಬಿಸಿದರು.