ಆರಂಭಿಕರಾದ ರುತುರಾಜ್ ಮತ್ತು ಫಾಫ್ ಡು ಪ್ಲೆಸಿಸ್ ಅವರ ಭರ್ಜರಿ ಜೊತೆಯಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿ ಲಗ್ಗೆ ಹಾಕಿದೆ.
ದೆಹಲಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 20 ಓವರ್ ಗಳಲ್ಲಿ 171 ರನ್ ಗೆ ನಿಯಂತ್ರಿಸಿದ ಚೆನ್ನೈ ಸೂಪರ್ ಕಿಂಗ್ಸ್ 18.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ಧೋನಿ ಪಡೆ ಆರಂಭದಲ್ಲಿ ಅನುಭವಿಸಿದ ಸೋಲಿನ ನಂತರ ಸತತ 5 ಗೆಲುವಿನೊಂದಿಗೆ 10 ಅಂಕ ಪಡೆದು ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ. ಸನ್ ರೈಸರ್ಸ್ ಹೈದರಾಬಾದ್ ಕೊನೆಯ ಸ್ಥಾನದಲ್ಲಿ ಕುಸಿತ ಕಂಡಿದೆ.
ರುತುರಾಜ್ ಗಾಯಕ್ವಾಡ್ 44 ಎಸೆತಗಳಲ್ಲಿ 12 ಬೌಂಡರಿ ನೆರವಿನಿಂದ 75 ರನ್ ಬಾರಿಸಿದರೆ, ಫಾಫ್ ಡು ಪ್ಲೆಸಿಸ್ 38 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 56 ರನ್ ಗಳಿಸಿದರು. ಇವರಿಬ್ಬರು ಮೊದಲ ವಿಕೆಟ್ ಗೆ 129 ರನ್ ಜೊತೆಯಾಟ ನಿಭಾಯಿಸಿದರು. ಮೊಯಿನ್ ಅಲಿ 15, ಸುರೇಶ್ ರೈನಾ ಅಜೇಯ 17 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಹೈದರಾಬಾದ್ ಪರ ರಶೀದ್ 3 ವಿಕೆಟ್ ಪಡೆದರೂ ಮತ್ತೊಂದು ಕಡೆಯಿಂದ ಯಾವುದೇ ನೆರವು ದೊರೆಯದೇ ನಿರಾಸೆ ಅನುಭವಿಸಿದರು.