ಬಾಗಲಕೋಟ : ಸಾವಿನ ಮನೆಯಲ್ಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಇಡೀ ಮಾನವ ಕುಲಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಈ ಸಂಕಷ್ಟವನ್ನ ಎಲ್ಲರೂ ಸೇರಿ ಎದುರಿಸಬೇಕಾಗಿದೆ. ಸಾವಿನ ಮನೆಯಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡಲು ಹೋಗಬಾರದು. ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿದ್ದವರು. ಈಗ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಇದ್ದಾರೆ. ಈ ಸ್ಥಾನದಲ್ಲಿದ್ದು ಸಿದ್ದರಾಮಯ್ಯ ಸರ್ಕಾರಕ್ಕೆ ಒಳ್ಳೆಯ ಸಲಹೆಗಳನ್ನ ನೀಡಲಿ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಜೊತೆಯಲ್ಲಿ ಕೈಜೋಡಿಸಲಿ ಎಂದರು.
ಈಗಾಗಲೇ ರಾಜ್ಯದಲ್ಲಿ ಕೋವಿಡ್ ಲಸಿಕೆ ಅಭಾವ ವಿಚಾರ ಸಂಬಂಧಿಸಿದಂತೆ ಮೊದಲನೇ ಡೋಸ್ ಕೊಟ್ಟವರಿಗೆ 2ನೇ ಡೋಸ್ ಕೊಡಲಿಕ್ಕೆ ಹೇಳಿದ್ದೇವೆ. ನಮ್ಮ ಉಸ್ತುವಾರಿ ಜಿಲ್ಲೆಗಳಲ್ಲೂ ಹೇಳಿದ್ದೇವೆ, ಸರ್ಕಾರ ಸೂಚನೆ ಕೂಡ ಕೊಟ್ಟಿದೆ. ನಾವು ಈಗಾಗಲೇ 3 ಕೋಟಿ ಲಸಿಕೆಗೆ ಆರ್ಡರ್ ಕೊಟ್ಟಿದ್ದೇವೆ. 2 ಕೋಟಿ ಕೋವಿಶೀಲ್ಡ್, 1 ಕೋಟಿ ಕೋವ್ಯಾಕ್ಸಿನ್ ಲಸಿಕೆ ಆರ್ಡರ ನೀಡಲಾಗಿದೆ. ಲಸಿಕೆ ಸಂಪೂಣ೯ ಪೂರೈಕೆ ಆಗ್ತಿಲ್ಲ, ಇವತ್ತಿನವರೆಗೂ 10 ಲಕ್ಷದಷ್ಟೂ ಪೂರೈಕೆ ಆಗುತ್ತಿಲ್ಲ ಎಂದು ತಿಳಿಸಿದರು.