ಚಾಮರಾಜನಗರ: ಎಲ್ಲಾ ದೇಶದಲ್ಲೂ ಒಂದು ಸಂವಿಧಾನ ಇದ್ದರೇ ನಮ್ಮಲ್ಲಿ ಎರಡು ಸಂವಿಧಾನಗಳಿವೆ. ಒಂದು ಲಿಖಿತ ಸಂವಿಧಾನವಾದರೇ, ಮನಸ್ಸಿಗೆ ಕಡಿವಾಣ ಹಾಕುವ ಮನುವಾದ ಎಂದು ಬೌದ್ಧ ಧರ್ಮ ಗುರು ಬೋಧಿರತ್ನ ಬಂತೇಜಿ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ಒಳಗಿನ ಆಡಳಿತಕ್ಕೆ ಒಂದು ಸಂವಿಧಾನ, ಮಾನಸಿಕವಾಗಿ ನಮ್ಮನ್ನು ಹಿಡಿತದಲ್ಲಿಡಲು ಮತ್ತೊಂದು ಸಂವಿಧಾನವಿದೆ. ಅಂದು ಅಂಬೇಡ್ಕರ್ ಅವರು ಮನುವಾದ ಸುಟ್ಟರೂ ಮನಸ್ಸಿನಲ್ಲಿರುವುದು ಹಾಗೆ ಉಳಿದಿದೆ. ಸಂವಿಧಾನದಲ್ಲಿರುವ ಶೇ 97 ರಷ್ಟು ಜನರನ್ನು ಶೇ.3 ರಷ್ಟು ಮಂದಿ ಮನುವಾದದ ಮೂಲಕ ಇನ್ನು ಹಿಡಿದಿಟ್ಟುಕೊಂಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಎಷ್ಟು ಇಕ್ಕಟ್ಟಿನಲ್ಲಿ ಆಡಳಿತ ನಡೆಸುತ್ತಿದ್ದಾರೆಂದರೆ ಅವರು ಸತ್ಯ ಹೇಳಲಾಗಲ್ಲ. ಇಲ್ಲಿಯವರೆಗೆ ಮನುವಾದಿಗಳು ಸತ್ಯ ಹೇಳಿದವರನ್ನೆಲ್ಲಾ ಕೊಂದಿದ್ದಾರೆ. ಆದ್ದರಿಂದ ಮೋದಿಯವರು ಮನುವಾದವನ್ನು ಒಪ್ಪಿದ್ದಾರೆ. ರಾಷ್ಟ್ರಕ್ಕೆ ಸತ್ಯ ಹೇಳದಿದ್ದರೆ ಇನ್ನು 5 ವರ್ಷ ಪ್ರಧಾನಿಯಾಗುತ್ತಾರೆ ಎಂದರು.
ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿ ಕೊಟ್ಟಾಗ ಯಾವೊಬ್ಬ ಹಿಂದುಳಿದ, ದಲಿತ ಎಂಎಲ್ ಎ, ಎಂಪಿ ವಿರೋಧಿಸಲಿಲ್ಲ. ವಿರೋಧಿಸಿದರೇ ಮನೆ ಪೂಜೆಗೆ ಬ್ರಾಹ್ಮಣ ಪುರೋಹಿತರು ಬರುವುದಿಲ್ಲವಲ್ಲ, ಗೆದ್ದಿರುವುದು ಸಂವಿಧಾನದಿಂದ ಆದರೆ ಪೂಜೆ ಮಾಡಿಸುವುದು ಬ್ರಾಹ್ಮಣರಿಂದ, ಶೇ. 97 ರಷ್ಟಿರುವ ಜನ ಶೇ. 3 ರಷ್ಟು ಜನರ ಮಾತು ಕೇಳಿಕೊಂಡು ಇನ್ನು ನಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.