ವಿಶೇಷ ವರದಿ. ನಾಗರಾಜ್. ಎಸ್
ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡುಗಳ ಪೈಕಿ 21 ರಲ್ಲಿ ಕಾಂಗ್ರೆಸ್, 13 ಬಿಜೆಪಿ ಮತ್ತು 5 ಜನ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಮತ್ತೆ 2013ರ ನಂತರ ಕಾಂಗ್ರೆಸ್ ಮತ್ತೆ ಜಯಭೇರಿ ಬಾರಿಸಿ ಆಡಳಿತಕ್ಕೆ ಬಂದಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮುಖಭಂಗ ಅನುಭವಿಸಿದೆ.
ಪಾಲಿಕೆ ಅಧಿಕಾರದ ಅವಧಿ ಮುಗಿದ ನಂತರ ಎರಡು ವರ್ಷಗಳು ತಡವಾಗಿ ಪಾಲಿಕೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ. ಬಿಜೆಪಿ ಪಾಳೇಯದಿಂದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಸಚಿವ ಆನಂದ್ ಸಿಂಗ್, ಶಾಸಕ ಸೋಮಶೇಖರ ರೆಡ್ಡಿ, ಮಾಜಿ ಶಾಸಕ ಸುರೇಶಬಾಬು ಅದಿಯಾಗಿ ಬಳ್ಳಾರಿ ಮಹಾನಗರಪಾಲಿಕೆ ಮೇಲೆ ಬಿಜೆಪಿ ಗೆಲ್ಲಿಸುವ ಸಲುವಾಗಿ ಕೋವಿಡ್ ನ್ನು ಲೆಕ್ಕಿಸದೆ ಕಾಲಿಗೆ ಚಕ್ರಕಟ್ಟಿಕೊಂಡು ಹಗಲಿರುಳು ಸಭೆ ಸಮಾರಂಭಗಳನ್ನ ಮಾಡುವ ಮೂಲಕ ಭರ್ಜರಿ ಪ್ರಚಾರ ನಡೆಸಿದರು. ಅಭಿವೃದ್ಧಿ ಮಂತ್ರ ಜಪಿಸಿದ್ದ ಬಿಜೆಪಿಗರು ಪಾಲಿಕೆ ಗೆಲ್ಲಿಸಿದ್ರೆ ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ ಅಂದರೂ ಕೂಡ ಮತದಾರರು ಸೊಪ್ಪು ಹಾಕಿಲ್ಲ. ಕಳೆದ ಹತ್ತು ವರ್ಷಗಳ ಅಡಳಿತವಿರೋಧಿ ಅಲೆಗೆ ಕಮಲ ಪಾಳೇಯ ಸೋಲುಂಡಿದೆ.
ಇತ್ತ ಜಿಲ್ಲೆಯಲ್ಲಿ ಒಡೆದ ಮನೆಯಂತಾಗಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಗ್ರಾಮೀಣ ಶಾಸಕ ನಾಗೇಂದ್ರ ನೇತೃತ್ವದಲ್ಲಿ ಸಂಘಟಿತವಾದ ಹೋರಾಟ ಮಾಡುವ ಮೂಲಕ ಅಡಳಿತ ಪಕ್ಷ ಬಿಜೆಪಿಗೆ ಬಾರಿ ಪೆಟ್ಟು ನೀಡಿದೆ. ಬಳ್ಳಾರಿ ಗ್ರಾಮೀಣ ಕೇತ್ರವೊಂದರಲ್ಲೆ 11ಕ್ಕೆ 10 ಅಭ್ಯರ್ಥಿಗಳನ್ನ ಗೆಲಿಸಿ ಕೊಡುವ ಮೂಲಕ ಪಾಲಿಕೆ ಗೆಲ್ಲುವ ಕನಸನ್ನು ನನಸು ಮಾಡಿದರು.
ಶಾಸಕರ ಪುತ್ರನಿಗೆ ಸೋಲು :
ನಗರದ 18 ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧೆ ಮಾಡಿದ್ದ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರ ಪುತ್ರ ಗಾಲಿ ಶ್ರವಣಕುಮಾರ ರೆಡ್ಡಿ ಗೆ ಸೋಲಾಗಿದೆ. ಇವರ ವಿರುದ್ದ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಮುಲ್ಲಂಗಿ ನಂದೀಶ್ ಜಯ ಗಳಿಸಿದ್ದಾರೆ. ಹೇಗಾದರೂ ಮಾಡಿ ಆಡಳಿತಾರೂಡ ಬಿಜೆಪಿಯ ಶಾಸಕರ ಪುತ್ರನಿಗೆ ಸೋಲು ಉಳಿಸಬೇಕೆಂದು ಕಾಂಗ್ರೆಸ್ ಪಾಳೆಯ ಮಾಡಿದ ಪಯತ್ನ ಸಫಲವಾಗಿದೆ.
ನಾನು ಪಾಲಿಕೆಯ ರಾಜಕೀಯಕ್ಕೆ ಬರಬೇಕು ಎಂಬ ಶಾಸಕರ ಪುತ್ರನ ಕನಸು ನುಚ್ಚು ನೂರಾಗಿದೆ. 39 ವಾರ್ಡುಗಳ ಪೈಕಿ ಇದು ಹೈವೋಲ್ಟೇಜ್ ಕ್ಷೇತ್ರವಾಗಿತ್ತು.
ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಪುತ್ರಿ ಉಮಾದೇವಿಗೆ ಸೋಲು:
ಜಿದ್ದಾ ಜಿದ್ದಿಗೆ ಕಾರಣವಾಗಿದ್ದ ನಗರದ 39 ವಾರ್ಡಿನಿಂದ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಅವರ ಪುತ್ರಿ ಬಿಜೆಪಿ ಅಭ್ಯರ್ಥಿ ಕೆ.ಉಮಾದೇವಿ ಅವರಿಗೆ ಸೋಲಾಗಿದೆ. ಇಲ್ಲಿ ತಮ್ಮವರೇ ಆಗಿದ್ದ ಗುಮ್ಮನೂರಿನ ಚಿನ್ನಾಯಪ್ಪ ಅವರ ಸೊಸೆ, ಪಿ.ಜಗನ್ ಅವರ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಪಿ.ಶಶಿಕಲಾ ಅವರು ಭರ್ಜರಿ ಜಯ ಸಾಧಿಸಿದ್ದಾರೆ.
ಒಟ್ಟಿನಲ್ಲಿ ಈ ಬಾರಿಯ ಪಾಲಿಕೆಯ ಚುನಾವಣೆಯಲ್ಲಿ ಕಮಲ ಪಕ್ಷವನ್ನು ಜನರು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮಣೆ ಹಾಕಿದ್ದಾರೆ.