ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಅರ್ಜೆಂಟೀನಾ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅವರನ್ನು ಹಿಂದಿಕ್ಕಿ ಅತೀ ಹೆಚ್ಚು ಗೋಲು ಸಿಡಿಸಿದ ವಿಶ್ವದ 2ನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದು, ಇನ್ನೊಂದು ಗೋಲು ಬಾರಿಸಿದರೆ ಸರ್ವಕಾಲಿಕ ದಾಖಲೆ ವೀರರ ಅಗ್ರ 10ರೊಳಗೆ ಸ್ಥಾನ ಪಡೆಯಲಿದ್ದಾರೆ.
ಸೋಮವಾರ ರಾತ್ರಿ ನಡೆದ ಬಾಂಗ್ಲಾದೇಶ ವಿರುದ್ಧದ 2022ರ ಫಿಫಾ ವಿಶ್ವಕಪ್ ಮತ್ತು 2023ರ ಎಎಫ್ ಸಿ ಏಷ್ಯನ್ ಕಪ್ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಛೆಟ್ರಿ 2 ಗೋಲು ಸಿಡಿಸಿ ಈ ದಾಖಲೆ ಬರೆದರು. ಛೇಟ್ರಿ ಅವರ ಸಹಾಯದಿಂದ ಭಾರತ 2-0 ಗೋಲುಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ ವಿಶ್ವಕಪ್ ಅಹರ್ತಾ ಸುತ್ತಿನಲ್ಲಿ ಮೊದಲ ಬಾರಿ ಭಾರತ ಗೆಲುವಿನ ದಾಖಲೆ ಬರೆಯಿತು.
ಛೆಟ್ರಿ ಮೊದಲ ಗೋಲು ಬಾರಿಸುತ್ತಿದ್ದಂತೆ 72 ಅಂತಾರಾಷ್ಟ್ರೀಯ ಗೋಲು ಸಿಡಿಸಿದ ಮೆಸ್ಸಿ ದಾಖಲೆಯನ್ನು ಮುರಿದರು. ನಂತರ ಮತ್ತೊಂದು ಗೋಲು ಸಿಡಿಸಿ ಅಂತರ ಹೆಚ್ಚಿಸಿಕೊಂಡರು. ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡೊ 103 ಗೋಲುಗಳ ದಾಖಲೆಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.