ವಾಷಿಂಗ್ಟನ್: ಅಮೆರಿಕ ಸಂಸತ್ ಭವನದ ಮೇಲೆ ಕಳೆದ ಜನೆವರಿಯಲ್ಲಿ ನಡೆದ ದಾಳಿಯ ನಂತರ ಡೊನಾಲ್ಡ್ ಟ್ರಂಪ್ ಟ್ವಿಟರ್, ಫೇಸ್ಬುಕ್ ಸೇರಿದಂತೆ ಎಲ್ಲ ಜಾಲತಾಣಗಳಿಂದ ನಿಷೇಧಕ್ಕೊಳಗಾಗಿದ್ದರು. ಈ ನಿಷೇಧವನ್ನು ಫೇಸ್ಬುಕ್ ಇನ್ನೂ ಹಿಂತೆಗೆದುಕೊಂಡಿಲ್ಲ.
ಹೀಗಿರುವಾಗಲೇ ಟ್ರಂಪ್ ತಮ್ಮ ಸೊಸೆ ಲಾರಾ ಟ್ರಂಪ್ ಅವರ ಫೇಸ್ಬುಕ್ ಖಾತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಫೇಸ್ಬುಕ್ ಗಮನಕ್ಕೆ ಬಂದ ಕೂಡಲೇ ಟ್ರಂಪ್ ಅವರ ಸಂದರ್ಶನವಿದ್ದ ವಿಡಿಯೋ ತುಣುಕನ್ನು ಡಿಲೀಟ್ ಮಾಡಲಾಗಿದೆ. ವಿ
ಡಿಯೋವನ್ನು ತಕ್ಷಣವೇ ತೆಗೆದುಹಾಕಿದ ಫೇಸ್ಬುಕ್ ಟ್ರಂಪ್ ಅವರಿಗೆ ಎಚ್ಚರಿಕೆಯನ್ನು ಸಹ ನೀಡಿದೆ. ವಿಡಿಯೋ ಡಿಲೀಟ್ ಮಾಡಿರುವ ಬಗ್ಗೆ ಫೇಸ್ಬುಕ್ ಲಾರಾ ಟ್ರಂಪ್ ಅವರಿಗೆ ಇ-ಮೇಲ್ ರವಾನಿಸಿದೆ. ಸೊಸೆಗೆ ನೊಟೀಸ್ ನಿಡುವುದರ ಮೂಲಕ ಟ್ರಂಪ್ ಅವರ ಮೇಲೆ ಹೇರಲಾಗಿದ್ದ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ.
ಇನ್ನು, ಡೊನಾಲ್ಡ್ ಟ್ರಂಪ್ ಶೀಘ್ರದಲ್ಲಿ ಸಾಮಾಜಿಕ ಜಾಲತಾಣಗಳಿಗೆ ಮರಳಲಿದ್ದಾರೆ ಎಂದು ಅವರ ವಕ್ತಾರ ಜೇಸನ್ ಮಿಲ್ಲರ್ ಮಾಹಿತಿ ನೀಡಿದ್ದರು. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೇಸನ್ ಮಿಲ್ಲರ್ ಟ್ರಂಪ್ ಪರ ಪ್ರಚಾರದ ಹೊಣೆಯನ್ನು ಹೊತ್ತಿದ್ದರು.
ಟ್ರಂಪ್ ತಮ್ಮದೇ ಆದ ಹೊಸ ವೇದಿಕೆಯೊಂದಿಗೆ ಸಾಮಾಜಿಕ ಮಾಧ್ಯಮಕ್ಕೆ ಮತ್ತೆ ಪ್ರವೇಶಿಸಲಿದ್ದಾರೆ. ಎರಡು-ಮೂರು ದಿನಗಳಲ್ಲಿ ಟ್ರಂಪ್ ಸಾಮಾಜಿಕ ಜಾಲತಾಣಕ್ಕೆ ಮರಳಲಿದ್ದಾರೆ. ಆಗ ನಿಜವಾದ ಆಟ ಆರಂಭವಾಗಲಿದೆ ಎಂದು ಜೇಸನ್ ಹೇಳಿದ್ದರು. ಆದರೆ ಟ್ರಂಪ್ ಅವರ ನೂತನ ಸಾಮಾಜಿಕ ಮಾಧ್ಯಮ ಹೇಗಿರಲಿದೆ ಎಂಬುದರ ಬಗ್ಗೆ ಜೇಸನ್ ಮಾಹಿತಿ ನೀಡಿರಲಿಲ್ಲ.