ಬೆಂಗಳೂರು: ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಮೈಸೂರಿನ ಕನ್ನಡ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಅವರ ಸಾರ್ವಜನಿಕ ಗ್ರಂಥಾಲಯಕ್ಕೆ ರಾಜಾರಾಂ ಮೋಹನರಾಯ್ ಗ್ರಂಥಾಲಯ ಪ್ರತಿಷ್ಠಾನದ ವತಿಯಿಂದ ಸಹಾಯ ಧನವನ್ನು ಮಂಜೂರು ಮಾಡಲು ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕೆಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಭಸ್ಮವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೆರವಿಗೆ ಧಾವಿಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಟಿಪ್ಪಣಿ ಮೂಲಕ ಸೂಚಿಸಿರುವ ಸಚಿವರು, ಗ್ರಂಥಾಲಯ ಇಲಾಖೆ ವತಿಯಿಂದ ನಿರ್ಧಿಷ್ಟ ಸಾಲುಗಳ ಪುಸ್ತಕ ಆಯ್ಕೆಯಾಗಿ ಲೇಖಕರು ಮತ್ತು ಪ್ರಕಾಶಕರಿಂದ ಸ್ವೀಕರಿಸಲ್ಪಟ್ಟು ಇಲಾಖೆಯಲ್ಲಿ ಸಂಗ್ರಹಿಸಲಾಗುವ ಆಯ್ದ ಪುಸ್ತಕ ಶೀರ್ಷಿಕೆಗಳನ್ನು ಸದರಿ ಗ್ರಂಥಾಲಯಕ್ಕೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಗ್ರಂಥಾಲಯಗಳು ಶ್ರೀಸಾಮಾನ್ಯನ ವಿಶ್ವವಿದ್ಯಾನಿಲಯಗಳೇ ಆಗಿವೆ. ಗ್ರಂಥಾಲಯ ಸೇವೆಯಂತಹ ಸಾರ್ವಜನಿಕ ಹಿತದೃಷ್ಟಿಯ ಹಾಗೂ ಸಾಮಾಜಿಕ ಕಳಕಳಿಯ ಸೇವೆಯ ಮೇಲೆ ದುಷ್ಕರ್ಮಿಗಳು ಈ ರೀತಿಯ ಪ್ರಹಾರ ನಡೆಸಿದ್ದು, ನಿಜಕ್ಕೂ ನೋವಿನ ಸಂಗತಿಯಾಗಿದೆ. ಹಾಗಾಗಿ ನಾವು ಇವರ ನೆರವಿಗೆ ಬರಬೇಕಾದದ್ದು ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯ ಹಾಗೂ ಸಾಮಾಜಿಕ ಕಳಕಳಿಯ ನೆಲೆಯಲ್ಲಿ ಗ್ರಂಥಾಲಯದಂತಹ ಉನ್ನತ ಸೇವೆಯ ಮೂಲಕ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಸೈಯದ್ ಇಸಾಕ್ ಅವರ ನೆರವಿಗೆ ಧಾವಿಸಬೇಕೆಂದು ಸುರೇಶ್ ಕುಮಾರ್ ಗ್ರಂಥಾಲಯ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದಾರೆ.