ಪಾಟ್ನಾ: ಬಿಹಾರದ ಕವಾಯಾ ಗ್ರಾಮದಲ್ಲಿ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಆರು ಮಕ್ಕಳು ಸಜೀವ ದಹನವಾಗಿದ್ದಾರೆ. ಗುಡಿಸಲಿನಲ್ಲಿ ಮಕ್ಕಳು ಜೋಳವನ್ನು ಸುಡಲು ಹೋದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಜೋಳದ ಕೊಯ್ಲಿನ ಸಮಯವಾಗಿದ್ದರಿಂದ ಮನೆಯವರೆಲ್ಲ ಹೊಲಕ್ಕೆ ತೆರಳಿದ್ದರು. ಈ ವೇಳೆ ಗುಡಿಸಲಿನಲ್ಲಿ ಆಡುತ್ತಿದ್ದ ಮಕ್ಕಳಿಗೆ ಜೋಳ ಸುಟ್ಟುಕೊಂಡು ತಿನ್ನುವ ಬಯಕೆಯಾಗಿದೆ. ಹೀಗೆ ಮಕ್ಕಳು ಜೊಳವನ್ನು ಸುಡುತ್ತಿರುವಾಗ ಒಲೆಯ ಬೆಂಕಿ ಗುಡಿಸಲಿನ ಮೇಲ್ಭಾಗದ ಹುಲ್ಲಿಗೆ ತಾಕಿದೆ.
ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಗುಡಿಸಲನ್ನು ಆವರಿಸಿದೆ. ಹೀಗಾಗಿ ಮಕ್ಕಳು ಗುಡಿಸಲಿನಿಂದ ಆಚೆ ಬರಲು ಸಾಧ್ಯವಾಗದೇ ಅಲ್ಲಿಯೇ ಸಜೀವವಾಗಿ ದಹನವಾಗಿದ್ದಾರೆನ್ನಲಾಗಿದೆ. ಒಣಹುಲ್ಲಿನ ಮನೆಯಾಗಿದ್ದರಿಂದ ತೀವ್ರವಾದ ಬಿಸಿಲಿದ್ದರಿಂದ ಬೆಂಕಿ ಬೇಗನೆ ಹರಡಿಕೊಂಡು ದುರ್ಘಟನೆ ಸಂಭವಿಸಿದೆ.
ಅಗ್ನಿಶಾಮಕ ಸಿಬ್ಬಂದಿ ಆಗಮಿಸುವಷ್ಟರಲ್ಲಿಯೇ ಗುಡಿಸಲು ಸುಟ್ಟು ಭಸ್ಮವಾಗಿತ್ತು. ಮೃತ ಮಕ್ಕಳೆಲ್ಲರೂ 3ರಿಂದ 6ವರ್ಷದೊಳಗಿನವರಾಗಿದ್ದಾರೆ.