ಚಾಮರಾಜನಗರ : ಸಂಸದ ಪ್ರತಾಪ್ ಸಿಂಹ ಅವರು ಒಬ್ಬ ಚುನಾಯಿತ ಜನಪ್ರತಿನಿಧಿಯಾಗಿ ಅಕ್ಸಿಜನ್ ದುರಂತ ನಡೆದಾಗಲೇ ದುರಂತಕ್ಕೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ರವರೇ ಕಾರಣ ಎಂದು ಹೇಳಬಹುದಿತ್ತು. ಆದರೆ, ದುರಂತ ನಡೆದ ಮರುದಿನವೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಪರ ವಕಾಲತ್ತು ವಹಿಸಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕ್ಸಿಜನ್ ದುರಂತ ನಡೆದ ಮಾರನೆಯ ದಿನ ರೋಹಿಣಿ ಸಿಂಧೂರಿ ಅವರು ನಡೆಸಿದ ಸಭೆಯಲ್ಲಿ ಶಾಸಕ ಸಾರಾ ಮಹೇಶ್ ಅವರು ಮಾತನಾಡಿ, ಚಾಮರಾಜನಗರಕ್ಕೆ ಆಕ್ಸಿಜನ್ ಕೊಡದ ಪರಿಣಾಮ ಅಲ್ಲಿ ದುರಂತವೇ ನಡೆದುಹೋಯಿತು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಪ್ರಶ್ನಿಸಿದ ವೇಳೆ ಸಂಸದ ಪ್ರತಾಪ್ ಸಿಂಹ ಮದ್ಯ ಪ್ರವೇಶಮಾಡಿ, ನಮ್ಮ ಪಾಲಿನ ಆಕ್ಸಿಜನ್ ಅನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಡಿಸಿ ರೋಹಿಣಿ ಸಿಂಧೂರಿ ಪರ ವಕಾಲತ್ತು ವಹಿಸಿದ್ದರು ಎಂದರು.
ನಂತರದ ದಿನಗಳಲ್ಲಿ ಸಂಸದ ಮತ್ತು ಡಿಸಿ ಅವರ ನಡುವೆ ಉಂಟಾದ ಭಿನ್ನಾಭಿಪ್ರಾಯಗಳಿಂದ ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲಾಧಿಕಾರಿ ವಿರುದ್ದ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.