ಮಂಗಳೂರು : ದೇವರನ್ನು ಕಾಣಲು ಶುಕ್ರವಾರ ಅಥವಾ ರವಿವಾರವೆಂದು ದಿನ ನಿಗದಿಯಾಗಿಲ್ಲ. ದೇವರನ್ನು ಪ್ರತಿನಿತ್ಯವೂ ಕಾಣಬಹುದು ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಉಳ್ಳಾಲದ ಪಿಲಾರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಶುಕ್ರವಾರ ಮಧ್ಯಾಹ್ನ ಅಥವಾ ರವಿವಾರ ಬೆಳಗ್ಗೆಯೇ ದೇವರನ್ನು ನೋಡಬೇಕು ಎಂದು ಏನಿಲ್ಲ. ಯಾವುದೇ ದಿನ, ಯಾವುದೇ ಕ್ಷಣ ದೇವರನ್ನು ಕಾಣಬಹುದು. ಹಿಂದೂ ಧರ್ಮದಲ್ಲಿ ಯಾವಾಗ ಬೇಕಾದರೂ ದೇವರನ್ನು ಪ್ರಾರ್ಥಿಸಬಹುದು ಎಂದರು.
ನಾವು ಯಾವ ರೀತಿ ದೇವರನ್ನು ಪೂಜೆ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಈ ದಿಕ್ಕಿನಲ್ಲೇ ದೇವರನ್ನು ಪೂಜಿಸಬೇಕು, ಆಗ ಮಾತ್ರ ದೇವರು ಸಿಗುತ್ತಾರೆ ಎಂದು ನಾವು ಹೇಳಿಲ್ಲ ಎಂದು ತಿಳಿಸಿದರು.
ಇನ್ನು ಶುಕ್ರವಾರ ಮಧ್ಯಾಹ್ನ 12.30 ಗಂಟೆಗೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಲ್ಲಾಹು ಅಕ್ಬರ್ ಎಂದರೆ ಮಾತ್ರ ದೇವರು ಎಂದು ಕೆಲವರು ಹೇಳುತ್ತಾರೆ. ರವಿವಾರದಂದು 7 ಗಂಟೆಗೆ ಅಥವಾ 9 ಗಂಟೆಗೆ ಪೂಜೆ ಮಾಡಿ ಪರಲೋಕದಲ್ಲಿರುವ ನಮ್ಮ ತಂದೆಯೇ ಎಂದರೆ ಮಾತ್ರ ದೇವರು ಸಿಕ್ಕುತ್ತಾರೆ ಎಂದು ಇನ್ನು ಕೆಲವರು ಹೇಳುತ್ತಾರೆ. ಹಾಗಾದರೆ ಶುಕ್ರವಾರ, ರವಿವಾರ ಬಿಟ್ಟು ಉಳಿದ ದಿನಗಳಲ್ಲಿ ದೇವರು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.