ಬೆಂಗಳೂರು: ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ಮೇ 24 ರವರೆಗೆ ಲಾಕ್ ಡೌನ್ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರವನ್ನು ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ಕೊರೊನಾ ನಿಯಂತ್ರಣಕ್ಕೆ ಮೇ. 10 ರಿಂದ ಮೇ. 24 ರವರೆಗೆ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ವಲಸಿಗರು ಹಾಗೂ ಇತರೇ ದುರ್ಬಲ ವರ್ಗದವರಿಗೆ ಅನಾನುಕೂಲವಾಗದಂತೆ ರಾಜ್ಯದ ನಗರಗಳ, ಜಿಲ್ಲೆಗಳ, ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.
ಮೇ. 24 ರವರೆಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ (ಬಿಬಿಎಂಪಿ ಹೊರತುಪಡಿಸಿ) ಇಂದಿರಾ ಕ್ಯಾಂಟೀನ್ ಗಳಲ್ಲಿ ಪ್ರಚಲಿತ ಮಾರ್ಗಸೂಚಿಗಳನ್ವಯ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಲು ಸೂಚಿಸಲಾಗಿದೆ.