ಬೆಂಗಳೂರು: ಗರಿಕೆ ಗಣಪತಿಯ ಪ್ರೀತಿಯ ವಸ್ತು. ಗರಿಕೆಯನ್ನು ಏರಿಸಿ ಪೂಜಿಸಿದರೆ ಗಣಪತಿ ದೇವರು ಪ್ರಸನ್ನನಾಗಿ ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ನಮ್ಮಲ್ಲಿದೆ. ಇದಲ್ಲದೇ ಗರಿಕೆಯಲ್ಲಿ ಹಲವು ಔಷಧೀಯ ಗುಣಗಳಿವೆ. ಗರಿಕೆಯ ಸೇವನೆಯಿಂದ ನಮ್ಮ ದೇಹಕ್ಕೆ ಹತ್ತಾರು ಲಾಭಗಳಿವೆ.
ಹಿಂದಿನ ಕಾಲದಿಂದಲೂ ರಕ್ತ ಸೋರುವಿಕೆ ತಡೆಗಟ್ಟಲು ಗರಿಕೆ ಹುಲ್ಲನ್ನು ಉಪಯೋಗಿಸಲಾಗುತ್ತದೆ. ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ, ಗರಿಕೆ ರಸವನ್ನು ಎರಡು ಬಿಂದು ಬಿಟ್ಟರೆ ತಕ್ಷಣ ರಕ್ತ ಸೋರುವುದು ನಿಲ್ಲುತ್ತದೆ. ಆದರೆ ಅಧಿಕ ಪ್ರಮಾಣದಲ್ಲಿ ರಸವನ್ನು ಮೂಗಿಗೆ ಬಿಟ್ಟುಕೊಳ್ಳುವುದೂ ಒಳ್ಳೆಯದಲ್ಲ.
ಗರಿಕೆ ರಸವನ್ನು ಹಾಗೇ ಜಗಿಯಬಹುದು ಅಥವಾ ರಸ ಕುಡಿಯುವುದರಿಂದ ಎಲುಬು ಗಟ್ಟಿಗೊಳಿಸುವುದಲ್ಲದೆ, ರಕ್ತಸ್ರಾವವನ್ನು ತಡೆಗಟ್ಟುವ ಶಕ್ತಿ ನೀಡುತ್ತದೆ.
ಗರಿಕೆ ರಸ ಸೇವಿಸುವುದರಿಂದ ಕಣ್ಣಿನ ಒಳಭಾಗದ ಮೇಲೆ ಕೆಂಪು ಕಲೆಗಳು ಮೂಡಿದ್ದಲ್ಲಿ ಮಾಯವಾಗುವವು. ದೃಷ್ಟಿ ಚುರುಕಾಗುವದು, ಕಣ್ಣು ಹೊಳಪಾಗುವುದು. ಅಲ್ಲದೇ, ಕಣ್ಣು ನೋವು, ಕಣ್ಣುರಿ ನಿವಾರಣೆಯಾಗುತ್ತದೆ.
ತಲೆಯಲ್ಲಿ ಬಹಳ ಹೊಟ್ಟಾಗಿ ತಲೆ ಕೆರೆದುಕೊಳ್ಳುವಂತಾಗಿದ್ದರೆ ಗರಿಕೆ ಹುಲ್ಲಿನ ರಸವನ್ನು ತೆಗೆದು ಅದನ್ನು ಮೊಸರಿಗೆ ಸೇರಿಸಿಕೊಂಡು ಹಚ್ಚಿಕೊಳ್ಳುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ. ಮತ್ತು ಕೂದಲು ಉದುರುವುದು ನಿಲ್ಲುತ್ತದೆ.
ಉರಿ ಮೂತ್ರದ ಸಮಸ್ಯೆ ಇರುವವರು ಗರಿಕೆ ರಸವನ್ನು ತೆಗೆದು ಅದನ್ನು ಒಂದು ಕಪ್ ನೀರಿಗೆ ಹಾಕಿಕೊಂಡು ಕುಡಿದರೆ ಉರಿ ಮೂತ್ರ ನಿವಾರಣೆಯಾಗುತ್ತದೆ. ಮೂತ್ರದ ಸೋಂಕು ನಿವಾರಣೆಯಾಗುತ್ತದೆ.