ಬೆಂಗಳೂರು: ಹಲಸಿನ ಹಣ್ಣು ಬಹುತೇಕರು ಇಷ್ಟ ಪಡುವ ಸೀಸನಲ್ ಹಣ್ಣು. ಈ ಹಣ್ಣನ್ನು ಬಳಸಿಕೊಂಡು ವಿವಿಧ ರೀತಿಯ ಖಾದ್ಯಗಳನ್ನು ಕೂಡ ತಯಾರಿಸುವರು. ಅದೇ ರೀತಿಯಾಗಿ ಹಲಸಿನ ಹಣ್ಣನ್ನು ಹಾಗೆ ತಿನ್ನಬಹುದು. ಇದು ಬೇಸಗೆಯಲ್ಲಿ ಹೆಚ್ಚಾಗಿ ಬೆಳೆಯುವ ಕಾರಣದಿಂದಾಗಿ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತಿದೆ.
ಖನಿಜಾಂಶ, ವಿಟಮಿನ್ ಗಳು ಮತ್ತು ಆಹಾರದ ನಾರಿನಾಂಶ ಹೊಂದಿರುವಂತಹ ಹಲಸಿನ ಹಣ್ಣು ಜೀರ್ಣಕ್ರಿಯೆ ವ್ಯವಸ್ಥೆಯ ಸಮಸ್ಯೆಯನ್ನು ದೂರ ಮಾಡುವುದು. ವಿಟಮಿನ್ ಎ ಒಳಗೊಂಡಿರುವ ಹಲಸಿನ ಹಣ್ಣು ಕಣ್ಣಿಗೆ ಕೂಡ ಒಳ್ಳೆಯದು. ಇದು ಕೊಬ್ಬು ರಹಿತವಾಗಿದೆ ಮತ್ತು ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇದೆ. ಇದನ್ನು ತಿಂದರೆ ಅದರಿಂದ ಇತರ ಹಲವಾರು ರೀತಿಯ ಲಾಭಗಳು ಕೂಡ ದೇಹಕ್ಕೆ ಲಭ್ಯವಾಗುವುದು.
ಹಲಸಿನ ಹಣ್ಣಿನಲ್ಲಿ ಹಾಲಿನಲ್ಲಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇದೆ. ಇದರಲ್ಲಿ ಪೊಟ್ಯಾಷಿಯಂ ಅಂಶವೂ ಇದ್ದು, ಮೂತ್ರಪಿಂಡಗಳ ಮೂಲಕ ನಷ್ಟವಾಗುವ ಕ್ಯಾಲ್ಸಿಂಯ ಅಂಶವನ್ನು ಇದು ತುಂಬಿಕೊಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ವಿಟಮಿನ್ ಸಿ ಅಂಶವೂ ಇದ್ದು, ಇದು ಹೆಚ್ಚಿನ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವು ಮಾಡುತ್ತದೆ. ಹಾಗಾಗಿ ಮೂಳೆಗಳ ಆರೋಗ್ಯ ಹಲಸು ತಿನ್ನುವುದರಿಂದಾಗಿ ಹೆಚ್ಚಾಗುತ್ತದೆ.
ಡಯಾಬಿಟೀಸ್ ನಿಂದಾಗಿ ದೇಹದಲ್ಲಿ ಹೈಪೋಗ್ಲೈಕಮಿಕ್ ಪರಿಣಾಮಗಳಾಗುತ್ತದೆ. ರೋಗಿಗಳಲ್ಲಿ ಗ್ಲೂಕೋಸ್ ಸಹಿಷ್ಣುತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇದಕ್ಕಿರುವುದರಿಂದಾಗಿ ವೈದ್ಯಕೀಯದಲ್ಲಿ ಔಷಧಗಳ ತಯಾರಿಕೆಗೂ ಕೂಡ ಹಲಸನ್ನು ಬಳಕೆ ಮಾಡುತ್ತಾರೆ.
ಹಲಸು ತಿನ್ನುವುದರಿಂದಾಗಿ ಅನಿಮಿಯಾ ಬರದಂತೆ ತಡೆಯಬಹುದು. ದೇಹದಲ್ಲಿ ಕಬ್ಬಿಣಾಂಶವು ಹೀರಿಹೋಗುವ ಸಾಮರ್ಥ್ಯ ಅಧಿಕವಾಗುವುದರಿಂದಾಗಿ ಈ ಸಾಮರ್ಥ್ಯ ಹೆಚ್ಚುತ್ತದೆ. ಇದರ ಜೊತೆಗೆ ಮೆಗ್ನೀಷಿಯಂ, ಮ್ಯಾಗನೀಸ್, ಫೋಲೇಟ್, ಕಾಪರ್, ಪ್ಯಾಂಟೋಥೆನಿಕ್ ಆಸಿಡ್, ವಿಟಮಿನ್ ಬಿ6, ನಿಯಾಸಿಟ್, ವಿಟಮಿನ್ ಎ,ಸಿ,ಇ,ಮತ್ತು ಕೆ ಅಂಶವು ಇದರಲ್ಲಿ ಇರುವುದರಿಂದಾಗಿ ರಕ್ತದ ಉತ್ಪಾದನೆಗೆ ಇದು ಸಹಾಯಕವಾಗಿದೆ.
ಹಲಸಿನ ಹಣ್ಣಿನಲ್ಲಿ ಉತ್ತಮವಾದ ಮಟ್ಟದಲ್ಲಿ ತಾಮ್ರದ ಅಂಶವಿದ್ದು, ಇದು ಅಗತ್ಯ ಹಾರ್ಮೋನುಗಳ ಉತ್ಪಾದನೆಗೆ ಮತ್ತು ಥೈರಾಯ್ಡ್ ಗ್ರಂಥಿಯಲ್ಲಿ ಕೆಲವು ಪದಾರ್ಥಗಳ ಹೀರಿಕೊಳ್ಳುವಿಕೆಗೆ ಸಹಾಯಕವಾಗಿರುತ್ತದೆ.
ಹಲಸನ್ನು ಏಷ್ಯಾದಲ್ಲಿ ಹಲವು ರೀತಿಯ ಪಾಕಪದ್ದತಿಗಳಲ್ಲಿ ಬಳಕೆ ಮಾಡುತ್ತಾರೆ. ಯಾವಾಗಲೂ ಹಲಸಿನ ಹಣ್ಣನ್ನು ಸೇವಿಸುವುದರಿಂದಾಗಿ ಆರೋಗ್ಯದಲ್ಲಿ ಹಲವಾರು ರೀತಿಯ ಲಾಭಗಳನ್ನು ಪಡೆಯಬಹುದಾಗಿದೆ.
ಹಲಸಿನ ಹಣ್ಣು ವಿಟಮಿನ್ ಎ ಯಿಂದ ಸಮೃದ್ಧವಾಗಿದ್ದು, ಆರೋಗ್ಯಕರ ಕಣ್ಣು ಮತ್ತು ತ್ವಚೆಗಾಗಿ ಒಂದು ಶಕ್ತಿಯುತ ನ್ಯೂಟ್ರಿಯೆಂಟ್ ಆಗಿದೆ. ಹಲಸಿನ ಹಣ್ಣು ಇರುಳುಗುರುಡುತನ ಮತ್ತು ಅಕ್ಷಿಪಟಲದ ಅವನತಿ ಸಮಸ್ಯೆಯನ್ನು ದೂರಮಾಡುತ್ತದೆ. ಹಲಸಿನ ತೊಳೆಗಳಿಗೆ ಬಾಳೆಹಣ್ಣಿನ ತಿರುಳು, ಹಸಿ ಕೊಬ್ಬರಿ ತುರಿ, ಜೇನು ತುಪ್ಪ, ಏಲಕ್ಕಿ ಸೇರಿಸಿ ಮಿಶ್ರಣ ಮಾಡಿ ಸೇವಿಸುವುದರಿಂದ ದುರ್ಬಲ ನರಗಳಿಗೆ ಬಲ ಬರುತ್ತದೆ.