ಚಿಕ್ಕಮಗಳೂರು: ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿ ನಡೆದಿದೆ.
ನ್ಯುಮೋನಿಯಾದಿಂದ ಕಾಯಿಲೆಯಿಂದ ಬಳಲುತ್ತಿದ್ದ ಹರೀಶ್ ಅವರನ್ನು ನಗರದ ಕೆಆರ್ಎಸ್ ಆಸ್ಪತ್ರೆಗೆ ಸೋಮವಾರ ಮಧ್ಯಾಹ್ನ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರಿಗೆ ಆಕ್ಸಿಜನ್ ನೀಡಿದ್ದು, ಆಕ್ಸಿಜನ್ ಖಾಲಿಯಾಗಿದ್ದರಿಂದ ವೈದ್ಯರು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. ಆ ಬಳಿಕ ಕುಟುಂಬಸ್ಥರು ಹರೀಶ್ ಅವರನ್ನ ನಗರದ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಹರೀಶ್ ಮೃತಪಟ್ಟಿದ್ದಾರೆ.
ಇನ್ನೂ ತಂದೆ ಹರೀಶ್ ಮೃತಪಟ್ಟ ಸುದ್ದಿಯನ್ನು ಪಿಯುಸಿ ಓದುತ್ತಿರುವ ಮಗ ತಾಯಿಗೆ ಮೊಬೈಲ್ ಮೂಲಕ ಫೋನ್ ಮಾಡಿ ತಿಳಿಸಿದ್ದಾರೆ. ಪತಿ ಮೃತ ಪಟ್ಟ ಸುದ್ದಿ ಕೇಳಿ ಪತ್ನಿ ಸೌಮ್ಯ ಕೂಡ ವಿಷಯ ತಿಳಿದ ಹತ್ತೇ ನಿಮಿಷದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಈ ಮೂಲಕ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ಹರೀಶ್ ಹಾಗೂ ಸೌಮ್ಯಾ ದಂಪತಿಗೆ ಕೋವಿಡ್ ಸೋಂಕು ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಪ್ಪ-ಅಮ್ಮನನ್ನು ಕಳೆದುಕೊಂಡ ಮಗ ಹಾಗೂ ಸಂಬಂಧಿಕರ ನೋವು ನೋಡುಗರ ಕಣ್ಣಲ್ಲೂ ನೀರು ತರಿಸುವಂತಿತ್ತು.