ಲಕ್ಷದ್ವೀಪ: ಭಾರತದ ಆರ್ಥಿಕ ವಲಯದಲ್ಲಿ ಅನುಮತಿಯಿಲ್ಲದೇ ಅಮೆರಿಕದ ಯುದ್ಧ ನೌಕೆ ಸಮರಾಭ್ಯಾಸ ನಡೆಸಿದೆ. ಅಂತರರಾಷ್ಟ್ರೀಯ ಸಾಗಾಟ ಹಕ್ಕು ಮತ್ತು ಸ್ವಾತಂತ್ರ್ಯ ತೋರ್ಪಡಿಸಲು ತನ್ನ ಯುದ್ಧನೌಕೆಯನ್ನು ಕಳುಹಿಸಿದ್ದಾಗಿ ಅಮೆರಿಕ ನೌಕಾಪಡೆ ಏಪ್ರಿಲ್ 7ರಂದು ನೀಡಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದೆ. ಲಕ್ಷದ್ವೀಪದ ಬಳಿಯ ಸಾಗರ ಪ್ರದೇಶ ಭಾರತದ ಸುಪರ್ದಿಯಲ್ಲಿದೆ.
ಇಲ್ಲಿ ಹಡಗುಗಳು ಹಾದು ಹೋಗಬೇಕಾದರೆ ಭಾರತದ ಅನುಮತಿ ಪಡೆದುಕೊಳ್ಳಬೇಕು. ಅನುಮತಿಯಿಲ್ಲದೇ ಪ್ರವೇಶಿಸಿದ್ದಲ್ಲದೇ, ತನ್ನ ಯುದ್ಧ ನೌಕೆಗಳು ಪೂರ್ವಾನುಮತಿ ಇಲ್ಲದೆ ಸಮರಾಭ್ಯಾಸ ನಡೆಸುವ ಮೂಲಕ ಭಾರತದ ಸಾಗರ ನೀತಿಯನ್ನು ಉಲ್ಲಂಘನೆ ಮಾಡಿಕೊಂಡಿರುವುದಾಗಿ ಅಮೆರಿಕದ ನೌಕಾಪಡೆ ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಿದೆ.
ಭಾರತದ ಇಇಝೆಡ್‌ನಲ್ಲಿ (ಆರ್ಥಿಕ ವಲಯ) ತಮ್ಮ ಯುದ್ಧ ನೌಕೆಗಳು ಫ್ರೀಡಂ ಆಫ್ ನೇವಿಗೇಷನ್ ಕಾರ್ಯಾಚರಣೆ ನಡೆಸಿರುವುದಾಗಿ ಅಮೆರಿಕ ನೌಕಾಪಡೆ ತಿಳಿಸಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಇದುವರೆಗೂ ಭಾರತೀಯ ನೌಕಾಪಡೆ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೂ ಮುನ್ನ ಸಹ ಹಲವು ಬಾರಿ ಅಮೆರಿಕದ ಯುದ್ಧನೌಕೆಗಳು ಲಕ್ಷದ್ವೀಪ ಸಮುದ್ರದಲ್ಲಿ ಹಾದುಹೋಗಿದ್ದವು. ಆದರೆ ಇಂಥ ಹೇಳಿಕೆಯನ್ನು ನೀಡಿರಲಿಲ್ಲ.