ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಂಟು ಜಿಲ್ಲೆಗಳ ಚಿತ್ರ ಮಂದಿರಗಳಲ್ಲಿ ಶೇ 50ರಷ್ಟು ಸೀಟು ಭರ್ತಿಗಷ್ಟೇ ಅವಕಾಶ ನೀಡಿದ್ದು, ಈಗಷ್ಟೇ ಚೇತರಿಸಿಕೊಂಡಿರುವ ಚಿತ್ರರಂಗಕ್ಕೆ ಮತ್ತೆ ಆತಂಕ ಮೂಡಿದೆ.
ಸರ್ಕಾರ ಸದ್ಯ ಹೊರಡಿಸಿರುವ ಮಾರ್ಗಸೂಚಿ ಏಪ್ರಿಲ್ 20ರವರೆಗೆ ಅನ್ವಯವಾಗಲಿದೆ. ಅದೇನೇ ಆದರೂ ಶೇ 50ಕ್ಕೆ ಇಳಿಸಿರುವ ಸರ್ಕಾರದ ಈ ನಿರ್ಧಾರ ಚಿತ್ರರಂಗದ ಮೇಲೆ ಪರಿಣಾಮ ಬೀರುವುದು ಖಚಿತ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಚಿತ್ರ ಏಪ್ರಿಲ್ 01ರಂದು ತೆರೆಕಂಡು ಭರ್ಜರಿ ಓಪನಿಂಗ್ ಪಡೆದಿದೆ. ವೀಕೆಂಡ್ ನಲ್ಲಿ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಬರುವ ನಿರೀಕ್ಷೆ ಇತ್ತು. ಜೊತೆಗೆ ಮುಂಗಡ ಬುಕಿಂಗ್ ಕೂಡಾ ಆಗಿತ್ತು. ಆದರೆ, ಸರ್ಕಾರದ ಹೊಸ ಮಾರ್ಗಸೂಚಿ ‘ಯುವರತ್ನ’ ಚಿತ್ರದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ಇದೇ ಕಾರಣದಿಂದ ಪುನೀತ್ ರಾಜ್‌ಕುಮಾರ್, ಸರ್ಕಾರ ತನ್ನ ನಿರ್ಧಾರವನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.