ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ರೂ ವಂಚಿಸಿ ತಲೆಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದಲ್ಲಿ ಬಂಧಿಸಲಾಗಿದ್ದು, ಭಾರತಕ್ಕೆ ಕರೆತರುವ ಬಗ್ಗೆ ಸಿದ್ಧತೆ ನಡೆದಿದೆ.
ಆ್ಯಂಟಿಗುವಾ ಮತ್ತು ಬಾರ್ಬಾಡೊಸ್ ನಿಂದ ದಿಢೀರ್ ನಾಪತ್ತೆಯಾಗಿದ್ದ ಮೆಹುಲ್ ಚೋಕ್ಸಿ ವಿರುದ್ಧ ಇಂಟರ್‌ಪೋಲ್ ಯೆಲ್ಲೋ ನೋಟಿಸ್ ಜಾರಿ ಮಾಡಿತ್ತು. ಮಂಗಳವಾರ ರಾತ್ರಿ ಬೋಟ್ ನಲ್ಲಿ ಪರಾರಿಯಾಗುವ ವೇಳೆ ಪೊಲೀಸರು ಚೋಕ್ಸಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದಿರುವ ಚೋಕ್ಸಿ 2018 ರಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದ. ದ್ವೀಪದ ದಕ್ಷಿಣ ಪ್ರದೇಶದಲ್ಲಿ ಭಾನುವಾರ ತನ್ನ ವಾಹನದಲ್ಲಿ ಕಾಣಿಸಿಕೊಂಡಿದ್ದ. ನಂತರ, ಆತನ ವಾಹನ ಮಾತ್ರ ಪತ್ತೆಯಾಗಿತ್ತು. ಭಾನುವಾರದಿಂದ ಚೋಕ್ಸಿ ಸುಳಿವು ಸಿಕ್ಕಿರಲಿಲ್ಲ ಎಂದು ಅವರ ವಕೀಲ ವಿಜಯ್ ಅಗರ್ವಾಲ್ ದೃಢಪಡಿಸಿದ್ದರು.
ಇನ್ನು ಪಿಎನ್ ಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಆ್ಯಂಟಿಗುವಾ ಸರ್ಕಾರವನ್ನು ಕೇಳಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಭಾನುವಾರ ಸಂಜೆ ಚೋಕ್ಸಿ ಕಾರಿನಲ್ಲಿ ತೆರಳಿ ನಿಗೂಢ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.
ಇದೀಗ ಚೋಕ್ಸಿಯನ್ನು ಬಂಧಿಸಿರುವ ಸ್ಥಳೀಯ ಪೊಲೀಸರು ಆಂಟಿಗುವಾ ಮತ್ತು ಬಾರ್ಬುಡಾದ ರಾಯಲ್ ಪೊಲೀಸ್ ಪಡೆಗೆ ಚೋಕ್ಸಿಯನ್ನು ಹಸ್ತಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.