ಮನೆ ಬಾಗಿಲಿಗೆ ಔಷಧ ತಲುಪಿಸುವ ದೇಶದ ಮೊದಲ ಮೆಡಿಕಲ್ ಡ್ರೋಣ್ ಸಿದ್ಧವಾಗಿದ್ದು, ಜೂನ್ 18ರಂದು ಸಿಲಿಕಾನ್ ಸಿಟಿ ಬೆಂಗಳೂರಿನಿಂದ 80 ಕಿ.ಮೀ. ದೂರದ ಗೌರಿಬಿದನೂರಿನಲ್ಲಿ ಪ್ರಯೋಗ ನಡೆಯಲಿದೆ.
ವಿಮಾನಯಾನ ಸಂಸ್ಥೆಯಿಂದ ಡ್ರೋಣ್ ಪ್ರಯೋಗ ನಡೆಸಲು ಟಾಟ್ರೆಲ್ ಏರೋಸ್ಪೆಸ್ ಸಿಸ್ಟಮ್ ಕಂಪನಿಗೆ ಮಾರ್ಚ್ 2020ರಲ್ಲೇ ಅನುಮತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಪ್ರಯೋಗಕ್ಕೆ ಅಂತಿಮ ಸಿದ್ಧತೆ ನಡೆಸಿದೆ.
ನಾರಾಯಣ ಆಸ್ಪತ್ರೆಯ ಹಿರಿಯ ವೈದ್ಯ ಡಾ.ದೇವಿ ಶೆಟ್ಟಿ ವೈದ್ಯಕೀಯ ಸೇವೆಗೆ ಬಳಸುವ ಡ್ರೋಣ್ ಗಳ ಪ್ರಯೋಗದ ಮೇಲೆ ಗಮನ ಹರಿಸಲಿದ್ದು, ಜೂನ್ 18ರಿಂದ ಸುಮಾರು 30ರಿಂದ 45 ದಿನಗಳ ಕಾಲ ಪ್ರಯೋಗ ನಡೆಯಲಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಔಷಧಗಳನ್ನು ಡ್ರೋಣ್ ಮೂಲಕ ಮನೆ ಬಾಗಿಲಿಗೆ ತಲುಪಿಸಲಾಗುವುದು.
ಈ ಡ್ರೋಣ್ ಮೂಲಕ 1 ಕೆಜಿ ತೂಕ ಹೊತ್ತು 15 ಕಿ.ಮೀ. ದೂರ ಸಾಗುವ ಸಾಮರ್ಥ್ಯ ಹೊಂದಿದ್ದರೆ, ಮತ್ತೊಂದು 2 ಕೆಜಿ ಔಷಧ ಹೊತ್ತು 12 ಕಿ.ಮೀ. ದೂರ ಸಾಗಬಲ್ಲದಾಗಿದೆ. ಸುಮಾರು 30ರಿಂದ 45 ದಿನಗಳ ಅವಧಿಯಲ್ಲಿ ಸುಮಾರು 100 ಪರೀಕ್ಷಾ ಹಾರಾಟ ನಡೆಸಲಾಗುವುದು ಎಂದು ಟಾಸ್ ಸಂಸ್ಥೆಯ ಸಿಇಒ ನಾರಾಯಣ ಕಂದಸ್ವಾಮಿ ತಿಳಿಸಿದ್ದಾರೆ.