ರವೀಂದ್ರ ಜಡೇಜಾ ಅವರ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 69 ರನ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಸತತ 4 ಪಂದ್ಯಗಳ ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ಆರ್ ಸಿಬಿ ಪ್ರಸ್ತುತ ಐಪಿಎಲ್ ನಲ್ಲಿ ಮೊದಲ ಬಾರಿ ಸೋಲುಂಡಿದೆ. ಈ ಮೂಲಕ 5 ಪಂದ್ಯಗಳಿಂದ 8 ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದರೆ ಅಷ್ಟೇ ಅಂಕ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ರನ್ ಸರಾಸರಿಯಲ್ಲಿ ಮೇಲುಗೈ ಸಾಧಿಸಿ ಅಗ್ರಸ್ಥಾನಕ್ಕೇರಿದೆ.
ಮುಂಬೈನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಗೆ 191 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ರಾಯಲ್ ಚಾಲೆಂಜರ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 122 ರನ್ ಗಳಿಸಲಷ್ಟೇ ಶಕ್ತವಾಯಿತು.
ಚೆನ್ನೈ ತಂಡದ ಗೆಲುವಿನಲ್ಲಿ ರವೀಂದ್ರ ಜಡೇಜಾ ಮಿಂಚಿದ್ದು, ಕೊನೆಯ ಓವರ್ ನಲ್ಲಿ ಸಿಡಿಸಿದ 37 ರನ್ ಸೇರಿದಂತೆ 62 ರನ್ ಬಾರಿಸಿದರೆ, ಬೌಲಿಂಗ್ ನಲ್ಲಿ 3 ವಿಕೆಟ್ ಪಡೆದು ಆಲ್ ರೌಂಡ್ ಪ್ರದರ್ಶನ ನೀಡಿದರು.
ಆರ್ ಸಿಬಿ ತಂಡಕ್ಕೆ ಕೊಹ್ಲಿ ಮತ್ತು ದೇವದತ್ ಪಡಿಕಲ್ ಮೊದಲ ವಿಕೆಟ್ ಗೆ 44 ರನ್ ಪೇರಿಸಿ ಮಿಂಚಿನ ಆರಂಭ ನೀಡಿದರು. ಆದರೆ ಕೊಹ್ಲಿ (8) ಔಟಾದ ನಂತರ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ದೇವದತ್ ಪಡಿಕಲ್ 15 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ 34 ರನ್ ಬಾರಿಸಿದರೆ, ಗ್ಲೆನ್ ಮ್ಯಾಕ್ಸ್ ವೆಲ್ 15 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 22 ರನ್ ಬಾರಿಸಿ ನಿರ್ಗಮಿಸಿದರು.