ಐಪಿಎಲ್ ಟೂರ್ನಿಯಲ್ಲೇ ಸೋಲರಿಯದ ಏಕೈಕ ತಂಡವಾಗಿ ಮುನ್ನುಗ್ಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಭಾನುವಾರ ನಡೆಯುವ ಸೂಪರ್ ಸಂಡೆ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿ ಮುಖಾಮುಖಿ ಆಗಲಿವೆ.
ಮುಂಬೈನಲ್ಲಿ ಭಾನುವಾರ ನಡೆಯುವ ಪಂದ್ಯ ಐಪಿಎಲ್ ಟೂರ್ನಿಯ ಹೈ ವೋಲ್ಟೆಜ್ ಪಂದ್ಯವಾಗಿದೆ. ಭಾರತ ತಂಡದ ಮಾಜಿ ಹಾಗೂ ಹಾಲಿ ನಾಯಕರ ಸಾರಥ್ಯದ ತಂಡಗಳು ಮೊದಲ ಬಾರಿ ಎದುರಾಗುತ್ತಿದ್ದು, ಅಭಿಮಾನಿಗಳಿಗೆ ರೋಚಕ ಅನುಭವ ನೀಡುವ ನಿರೀಕ್ಷೆ ಇದೆ.
ಆರ್ ಸಿಬಿ ತಂಡ ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ ನಾಲ್ಕರಲ್ಲೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರು ಪಂದ್ಯಗಳ ಗೆಲುವಿನೊಂದಿಗೆ ಆತ್ಮವಿಶ್ವಾಸದಲ್ಲಿದೆ. ಆರ್ ಸಿಬಿಗೆ ಹೋಲಿಸಿದರೆ ಚೆನ್ನೈ ಅತ್ಯಂತ ಬಲಿಷ್ಠ ಹಾಗೂ ಸಮತೋಲಿತ ತಂಡವಾಗಿದೆ. ಆದರೆ ಆರ್ ಸಿಬಿಯ ಸ್ಫೂರ್ತಿಯುತ ಆಟ ತಂಡದ ಗೆಲುವಿನ ಮಂತ್ರವಾಗಿದೆ.
ಆರ್ ಸಿಬಿ ತಂಡದಲ್ಲಿ ನಾಲ್ವರು ಪ್ರಮುಖ ಬ್ಯಾಟ್ಸ್ ಮನ್ ಗಳು ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ದೇವದತ್ ಪಡಿಕಲ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಎಬಿ ಡಿವಿಲಿಯರ್ಸ್ ಬೆನ್ನೆಲುಬಾಗಿದ್ದಾರೆ. ಆದರೆ ಚೆನ್ನೈ ತಂಡದಲ್ಲಿ 8ನೇ ಕ್ರಮಾಂಕದವರೆಗೂ ಅತ್ಯುತ್ತಮ ಬ್ಯಾಟ್ಸ್ ಮನ್ ಗಳಿದ್ದಾರೆ. ಸ್ವತಃ ಧೋನಿ ದೀರ್ಘ ಸಮಯದ ನಂತರ ರನ್ ಗಳಿಸಲು ಆರಂಭಿಸಿರುವುದು ತಂಡದ ಬಲ ಹೆಚ್ಚಿಸಿದೆ.
ಆರ್ ಸಿಬಿ ತಂಡದಲ್ಲಿ ಮೊಹಮದ್ ಸಿರಾಜ್, ಹರ್ಷಲ್ ಪಟೇಲ್, ಕೈಲ್ ಜೇಮಿನ್ಸನ್ ಮತ್ತು ಯಜುರ್ವೆಂದ್ರ ಚಾಹಲ್ ಪ್ರಮುಖ ದಾಳಿಕೋರರಾಗಿದ್ದರೆ, ಚೆನ್ನೈ ತಂಡದಲ್ಲಿ ದೀಪಕ್ ಚಾಹರ್, ಡ್ವೈನ್ ಬ್ರಾವೊ, ರವೀಂದ್ರ ಜಡೇಜಾ, ಮೊಯಿನ್ ಅಲಿ ಲುಂಗಿ ನೆಗೆಡಿ, ಶಾರ್ದೂಲ್ ಠಾಕೂರ್ ಪ್ರಮುಖ ಅಸ್ತ್ರವಾಗಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 3.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸ್ಥಳ: ಮುಂಬೈ ವಾಂಖೇಡೆ