ಅಪಾರ ನಿರೀಕ್ಷೆ ಮೂಡಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲೇ ಸೊನ್ನೆಗೆ ಔಟಾಗಿ ನಿರಾಸೆ ಮೂಡಿಸಿದ್ದೂ ಮಾತ್ರವಲ್ಲ ಅಪರೂಪದ ದಾಖಲೆ ಕೂಡ ಬರೆದರು.
ಚೆನ್ನೈ ಶನಿವಾರ ನಡೆದ ಪಂದ್ಯದ ಚೆನ್ನೈ ಇನಿಂಗ್ಸ್ ನ 16ನೇ ಓವರ್ ನಲ್ಲಿ ಆಡಲಿಳಿದ ಧೋನಿ ಕೇವಲ 2ನೇ ಎಸೆತದಲ್ಲಿ ಅವಿಶ್ ಖಾನ್ ಎಸೆತದಲ್ಲಿ ಔಟಾಗಿ ನಿರಾಸೆ ಮೂಡಿಸಿದರು. ಈ ಮೂಲಕ ಧೋನಿ ಐಪಿಎಲ್ ನ ಮೊದಲ ಪಂದ್ಯದಲ್ಲಿ ಮೊದಲ ಬಾರಿ ಶೂನ್ಯಕ್ಕೆ ಔಟಾದರು.
ಧೋನಿ 2015ರ ನಂತರ ಮೊದಲ ಬಾರಿ ಶೂನ್ಯಕ್ಕೆ ಔಟಾದರು. ಅಲ್ಲದೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 2ನೇ ಬಾರಿ ಶೂನ್ಯಕ್ಕೆ ಔಟಾದರು. ಒಟ್ಟಾರೆ 4ನೇ ಬಾರಿ ಖಾತೆ ತೆರೆಯಲು ವಿಫಲರಾಗಿರುವ ಧೋನಿ 2010ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹಾಗೂ 2015ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೊನ್ನೆ ಸುತ್ತಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್7 ವಿಕೆಟ್ ಗೆ 189 ರನ್ ಗಳಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್ ಮತ್ತು ಪೃಥ್ವಿ ಶಾ ಅವರ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ 18.4 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. 7 ವಿಕೆಟ್ ಗಳಿಂದ ಸೋಲುಂಡ ಚೆನ್ನೈ ಮೊದಲ ಪಂದ್ಯದಲ್ಲೇ ಗೆಲುವಿನ ಖಾತೆ ತೆರೆಯಲು ವಿಫಲವಾಯಿತು.