ಸಾರಿಗೆ ಇಲಾಖೆಯ ಬಸ್ ಗಳ ಮೇಲೆ ಕಲ್ಲು ಹೊಡೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ರೈತಪರ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಸೋಮವಾರ ಬೆಳಿಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆ ಬಸ್ ಗಳ ಮೇಲೆ ಕಲ್ಲು ಹೊಡೆಯೋದು, ಹಿಂಸೆ ಮಾಡೋದು ನಮ್ಮ ಸಂಸ್ಕೃತಿ ಅಲ್ಲ. ಉಪವಾಸ ಸತ್ಯಗ್ರಹ ಮಾಡೋದಕ್ಕೆ ಹೇಳಿದ್ದೇವೆ. ಕಲ್ಲು ಹೊಡೆಯೋರು, ಹಿಂಸೆ ಮಾಡೋರಾ ಮೇಲೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಿ ಎಂದು ಸ್ಪಷ್ಟಪಡಿಸಿದರು.
ಗೃಹ ಇಲಾಖೆಗೆ ಸಂಬಂಧಿಸಿದ ವಿಷಯದ ಮೇಲೆ ಬಂದಿದ್ದೆ. ಇದೇ ವೇಳೆ ಸಾರಿಗೆ ಇಲಾಖೆ ನೌಕರರ ಸಮಸ್ಯೆ ಕುರಿತು ಚರ್ಚಿಸಿದ್ದೇನೆ. ಸಮಸ್ಯೆ ಎಷ್ಟು ಬೇಗ ಮುಗಿಸುತ್ತಾರೋ ಅಷ್ಟು ಬೇಗ ಹೋರಾಟ ಅಂತ್ಯಗೊಳ್ಳುತ್ತೆ ಎಂದು ಹೇಳಿದರು.
ಸಿಎಂ ಆಸ್ಪತ್ರೆಯಲ್ಲಿದ್ದಾರೆ. ಸಾರಿಗೆ ಸಚಿವರು ಕೂಡ ಕ್ವಾರಂಟೈನ್‌ನಲ್ಲಿದ್ದಾರೆ. ಎರಡು ದಿನದಲ್ಲಿ ಬರುತ್ತಾರೆ. ಎಲ್ಲರ ಜೊತೆ ಚರ್ಚಿಸಿ ಮಾತುಕತೆ ನಡೆಸುವ ಬಗ್ಗೆ ಭರವಸೆ ನೀಡಿದ್ದಾರೆ. ಕೋವಿಡ್ ಹೆಚ್ಚಾಗುತ್ತಿರುವುದರಿಂದ ಮುಷ್ಕರ ಕೈಬಿಡಿ ಎಂದು ಬೊಮ್ಮಾಯಿ ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು.
2004ರಲ್ಲಿಯೇ ಶೇ.20ರಷ್ಟು ಏರಿಕೆ ಶೇ.6ರಷ್ಟು ಬಡ್ಡಿ ಸೇರಿಸಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಅವರ ಪ್ರಕಾರ ಹೋದರೆ 6ನೇ ವೇತನ ಆಯೋಗಕ್ಕಿಂತ ಹೆಚ್ಚಾಗಲಿದೆ. ಸರಕಾರ ಯಾವುದು ಆಯ್ಕೆ ಮಾಡಿಕೊಳ್ಳುತ್ತೋ ನೋಡೋಣ ಎಂದು ಕೋಡಿಹಳ್ಳಿ ಹೇಳಿದರು.