ಚಾಮರಾಜನಗರ : ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ದ 304 ಕೇಸ್(ಕೊಲೆ ಪ್ರಕರಣ) ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಆಗ್ರಹಿಸಿದರು.
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಅವರು ಸುಳ್ಳು ಮಾಹಿತಿ ನೀಡಿದ್ದು, ಕೂಡಲೇ ಅವರು ರಾಜೀನಾಮೆ ಕೊಡಬೇಕು. ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸುಧಾಕರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಈ ದುರಂತಕ್ಕೆ ಕಾರಣರಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಿ ಎಂದು ಒತ್ತಾಯಿಸಿದರು.
ಜಿಲ್ಲಾಡಳಿತ ವಿಫಲ ಎಂಬುದು ನ್ಯಾಯಮೂರ್ತಿಗಳ ವರದಿಯಲ್ಲಿ ಬಹಿರಂಗವಾಗಿದೆ. ಆ ದಿನ ನಡೆದ ಎಲ್ಲಾ ಸನ್ನಿವೇಶಗಳ ಬಗ್ಗೆ ನ್ಯಾಯಮೂರ್ತಿಗಳು ಸಂಕ್ಷಿಪ್ತವಾಗಿ ಒಳ್ಳೆಯ ವರದಿ ಸಲ್ಲಿಸಿದ್ದಾರೆ. ಈ ಸರ್ಕಾರ ಸಂಪೂರ್ಣವಾಗಿ ಆಡಳಿತದಲ್ಲಿ ವಿಫಲವಾಗಿದೆ. ಇದಕ್ಕೆ ಕಾರಣರಾದ ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಿರುದ್ಧ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು. ಹಾಗೂ ಈ ದುರಂತದಲ್ಲಿ ಸಾವೀಗಿಡಾಗಿರುವ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಹೇಳಿದರು.