ಬೆಂಗಳೂರು : ಕನ್ನಡವನ್ನು ಕೆಟ್ಟ ಭಾಷೆಯೆಂದು ಬಿಂಬಿಸಿದ ಗೂಗಲ್ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದ ಕೆಟ್ಟ ಭಾಷೆ ಯಾವುದು ಎಂದು ನೆಟ್ಟಿಗರು ಗೂಗಲ್ ನಲ್ಲಿ ಪ್ರಶ್ನೆ ಮಾಡಿದರೆ ಕನ್ನಡ ಎಂಬ ಉತ್ತರ ಬರುತ್ತಿತ್ತು. ಇದು ಅತ್ಯಂತ ಖಂಡನೀಯ ಸಂಗತಿ. ಗೂಗಲ್ ಆಗಲಿ, ಬೇರೆ ಯಾರೇ ಆಗಲಿ ಕನ್ನಡ ಭಾಷೆ ಬಗ್ಗೆ ಗೌರವವಿಲ್ಲದೆ ವರ್ತಿಸಿದರೆ ಅಥವಾ ಕನ್ನಡಕ್ಕೆ ಅಪಮಾನ ಎಸಗಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕನ್ನಡ ಭಾಷೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಭಾರತದ ಶಾಸ್ತ್ರೀಯ ಭಾಷೆ ಎಂಬ ಹೆಗ್ಗಳಿಕೆ ಪಡೆದಿರುವ ಭಾಷೆಯ ಬಗ್ಗೆ ಕೀಳಾಗಿ ಮಾತಾಡಿದರೂ ಅದನ್ನು ಸಹಿಸಲಾಗುವುದಿಲ್ಲ ಎಂದರು.
ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅವರಿಗೆ ಈ ಸಂಬಂಧ ಕಾನೂನು ಇಲಾಖೆಯ ಜೊತೆಗೂಡಿ ಚರ್ಚಿಸಿ ಕೂಡಲೇ ಗೂಗಲ್ ಗೆ ನೋಟಿಸ್ ನೀಡಲು ಸೂಚಿಸಿದ್ದೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.