ಮದುವೆ ನಂತರವೂ ಗಂಡನ ಮನೆಗೆ ಹೋಗಲು ಇಷ್ಟವಿಲ್ಲದೇ ನವವಿವಾಹಿತೆ ಪ್ರಿಯಕರನ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂದೋಗಿ ಗ್ರಾಮದಲ್ಲಿ ನಡೆದಿದೆ.
ಪಂಚಪ್ಪ ಹಾಗೂ ಸಕ್ಕೂಬಾಯಿ ಗ್ರಾಮದ ಹೊರವಲಯದ ಜಮೀನಿನಲ್ಲಿರುವ ಮಾವಿನ ಮರಕ್ಕೆ ಒಂದೇ ಹಗ್ಗದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಕ್ಕೂಬಾಯಿ ಮತ್ತು ಪಂಚಪ್ಪ ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಕಳೆದ ತಿಂಗಳು ಸಕ್ಕೂಬಾಯಿಗೆ ಬೇರೆ ಹುಡುಗನ ಜೊತೆಗೆ ವಿವಾಹ ಆಗಿತ್ತು. ಗಂಡನ ಮನೆಗೆ ಹೋಗಲು ಇಚ್ಚಿಸದ ಸಕ್ಕೂಬಾಯಿ, ಪ್ರಿಯಕರ ಪಂಚಪ್ಪನ ಜೊತೆ ಪ್ರೀತಿ ಮುಂದುವರಿಸಲು ಬಯಸಿದ್ದಳು.
ಗಂಡನ ಮನೆಗೆ ಹೋದರೆ ನಾವಿಬ್ಬರೂ ಬೇರೆ ಬೇರೆ ಆಗುತ್ತೇವೆ ಎಂದು ನೊಂದ ಪ್ರೇಮಿಗಳು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದಾಕ್ಷಣವೇ ಎರಡೂ ಕುಟುಂಬಗಳ ಸದಸ್ಯರು ಸ್ಥಳಕ್ಕೆ ದೌಡಾಯಿಸಿದ್ದು, ಮಕ್ಕಳ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.