ನಾರದಾ ಲಂಚ ಸ್ವೀಕಾರ ಪ್ರಕರಣದಲ್ಲಿ ಇಬ್ಬರು ಸಚಿವರನ್ನು ಸಿಬಿಐ ಬಂಧಿಸಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಗೆ ಭೇಟಿ ನೀಡಿದ್ದಾರೆ.
ಸೋಮವಾರ ಬೆಳಿಗ್ಗೆ 9 ಗಂಟೆಗೆ ಕೇಂದ್ರ ಭದ್ರತಾ ಪಡೆಯ ಸಿಬ್ಬಂದಿ ನೆರವಿನೊಂದಿಗೆ ಸಚಿವ ಫಿರ್ಹಾದ್ ಹಕೀಮ್ ಮತ್ತು ಸುರ್ಬತಾ ಮುಖರ್ಜಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.
ಸೂಕ್ತ ದಾಖಲೆಗಳು ಹಾಗೂ ಅನುಮತಿ ಪತ್ರ ಇಲ್ಲದೇ ಟಿಎಂಸಿ ಸಚಿವರನ್ನು ಗುರಿಯಾಗಿಸಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಶಾಸಕ ಮದನ್ ಮಿತ್ರಾ, ಮಾಜಿ ಟಿಎಂಸಿ ಮುಖಂಡ ಸೋವನ್ ಚಟರ್ಜಿ ಅವರನ್ನು ಸಿಬಿಐ ಕಚೇರಿಗೆ ಕರೆದೊಯ್ಯಲಾಗಿದೆ. ಸೋವನ್ ಚಟರ್ಜಿ ಮಾಜಿ ಮೇಯರ್, ಮಾಜಿ ಸಚಿವರಾಗಿದ್ದು, 2019ರಲ್ಲಿ ಟಿಎಂಸಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಬಿಜೆಪಿಗೂ ಗುಡ್ ಬೈ ಹೇಳಿದ್ದರು.
ಪಶ್ಚಿಮ ಬಂಗಾಳದ ಗವರ್ನರ್ ಈ ನಾಲ್ವರ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದರು. ಸಿಬಿಐ ಈ ನಾಲ್ವರನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಲು ನಿರ್ಧರಿಸಿದ್ದರು. ಕೋರ್ಟ್ ಗೆ ಹಾಜರುಪಡಿಸಿದರೆ ನ್ಯಾಯಾಂಗ ಬಂಧನ ಅಥವಾ ಪೊಲೀಸ್ ಕಸ್ಟಡಿಗೆ ನೀಡುವ ಸಾಧ್ಯತೆ ಇದೆ.