ನಂದಿಗ್ರಾಮ: ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದ್ದು ಇನ್ನುಳಿದ ಏಳು ಹಂತಗಳ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಠಾಕೂರ್ ಚೌಕ್‌ನಲ್ಲಿ ಇಂದು ಪಾದಯಾತ್ರೆ ನಡೆಸಿದ್ದಾರೆ.
ಗಾಲಿಕುರ್ಚಿಯಲ್ಲಿ ಕುಳಿತುಕೊಂಡೇ ಮಮತಾ ಬ್ಯಾನರ್ಜಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಮಾರ್ಚ್ 10ರಂದು ನಾಮಪತ್ರ ಸಲ್ಲಿಸಿ ಹಿಂತಿರುಗುವ ಸಂದರ್ಭ ಅಪರಿಚಿತರು ತಳ್ಳಿದ್ದರಿಂದ ಮಮತಾ ಕಾಲಿಗೆ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಬಳಿಕ ಬಿಡುಗಡೆಯಾಗಿದ್ದರು. ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ ಕಣದಲ್ಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಶನಿವಾರ ನಡೆದಿದ್ದು ಶೇ. 80ರಷ್ಟು ಮತದಾನವಾಗಿದೆ. ಎರಡನೇ ಹಂತದ ಮತದಾನ ಏಪ್ರಿಲ್1, ಮೂರನೇ ಹಂತದ್ದು ಏಪ್ರಿಲ್ 6, ನಾಲ್ಕನೇ ಹಂತದ್ದು ಏಪ್ರಿಲ್ 10, ಐದನೇ ಹಂತದ್ದು ಏಪ್ರಿಲ್ 17, ಆರನೇ ಹಂತ- ಏಪ್ರಿಲ್ 22, ಏಳನೇ ಹಂತ- ಏಪ್ರಿಲ್ 26 ಮತ್ತು 8ನೇ ಹಂತದ ಮತದಾನ ಏಪ್ರಿಲ್ 29ರಂದು ನಡೆಯಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.